No menu items!
16.9 C
Munich
Wednesday, May 27, 2026

ದೆಹಲಿಯಿಂದ ವಾಪಸ್ ಆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ತಡರಾತ್ರಿ ಸಭೆ

Must read

ದೆಹಲಿಯಿಂದ ವಾಪಸ್ ಆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ತಡರಾತ್ರಿ ಸಭೆ

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ನಡೆ ಹಾಗೂ ರಾಜ್ಯ ರಾಜಕೀಯ ವಲಯದಲ್ಲಿನ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ತಕ್ಷಣವೇ ಮುಖ್ಯಮಂತ್ರಿ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಮಹತ್ವದ ಸಭೆ ನಡೆದಿರುವುದು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಮಧ್ಯರಾತ್ರಿ ಸುಮಾರು 12 ಗಂಟೆಗೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಸಚಿವರಾದ ಕೃಷ್ಣ ಬೈರೇಗೌಡ ಮತ್ತು ದಿನೇಶ್ ಗುಂಡೂರಾವ್ ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿ ಕಾರಿನಲ್ಲೇ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ಪೊನ್ನಣ್ಣ ಅವರು ಸಿಎಂ ನಿವಾಸಕ್ಕೆ ತೆರಳಿದರು.
ಇದಾದ ನಂತರ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವ ಎಂ.ಬಿ. ಪಾಟೀಲ್, ಬೈರತಿ ಸುರೇಶ್, ಡಾ. ಎಂ.ಸಿ. ಸುಧಾಕರ್, ಶಾಸಕರಾದ ಅಶೋಕ್ ಪಟ್ಟಣ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಪ್ರಮುಖ ನಾಯಕರು ‘ಕಾವೇರಿ’ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದರು. ತಡರಾತ್ರಿ ನಡೆದ ಈ ಸಭೆ ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ನಡೆದ ಮಾತುಕತೆಗಳು ಹಾಗೂ ಅಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ಕುರಿತ ಊಹಾಪೋಹಗಳ ನಡುವೆಯೇ ಆಪ್ತ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ರಾಜಕೀಯ ಹಾಗೂ ಕಾನೂನಾತ್ಮಕ ನಡೆಗಳ ಬಗ್ಗೆ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಇಂದು ಕೂಡ ಆಪ್ತ ಸಚಿವರು ಹಾಗೂ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಇಂದಿನ ಬೆಳವಣಿಗೆಗಳು ಮತ್ತಷ್ಟು ಮಹತ್ವ ಪಡೆದುಕೊಂಡಿವೆ.
ಇದರ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿವೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದಲ್ಲಿರುವ ನೆಹರು ಪ್ರತಿಮೆಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಡೆಯಲಿವೆ. ಆದರೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಸಹ ಕುತೂಹಲಕ್ಕೆ ಕಾರಣವಾಗಿದೆ.

- Advertisement -spot_img

More articles

- Advertisement -spot_img

Latest article