No menu items!
27.1 C
Munich
Friday, May 29, 2026

ಹಣ ಡಬ್ಲಿಂಗ್ ದಂಧೆ ಪ್ರಕರಣದ ಸಾಕ್ಷಿಯ ಹತ್ಯೆ; ಚಿತ್ರದುರ್ಗದ ಜಿಪಂ ಮಾಜಿ ಸದಸ್ಯ ಬಂಧನ

Must read

ಹಣ ಡಬ್ಲಿಂಗ್ ದಂಧೆ ಪ್ರಕರಣದ ಸಾಕ್ಷಿಯ ಹತ್ಯೆ; ಚಿತ್ರದುರ್ಗದ ಜಿಪಂ ಮಾಜಿ ಸದಸ್ಯ ಬಂಧನ

ಚಿತ್ರದುರ್ಗ: ಹಣ ಡಬ್ಲಿಂಗ್ ದಂಧೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ್ ಅಲಿಯಾಸ್ ಕೋಟಾನೋಟ್ ಚಂದ್ರ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದ ಮಲ್ಲಿಕಾರ್ಜುನ (40) ಅವರಿಗೆ ಲೋನ್ ಕೊಡಿಸುವುದಾಗಿ ನಂಬಿಸಿ ಚಂದ್ರಶೇಖರ್ ವಂಚನೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಮಲ್ಲಿಕಾರ್ಜುನ ಅವರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಹಣ ಡಬ್ಲಿಂಗ್ ದಂಧೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಮಲ್ಲಿಕಾರ್ಜುನ ಪ್ರಮುಖ ಸಾಕ್ಷಿಯಾಗಿದ್ದರು. ಇದರಿಂದ ಪ್ರಕರಣ ಬಯಲಾಗುವ ಭೀತಿಯಿಂದ ಚಂದ್ರಶೇಖರ್, ಮಲ್ಲಿಕಾರ್ಜುನ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ಮೇ 1ರಂದು ಚಿತ್ರದುರ್ಗದ ಜಾನಕೊಂಡ ಸಮೀಪದ ತೋಟದ ಮನೆಯಲ್ಲಿ ಮಲ್ಲಿಕಾರ್ಜುನ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
ಇದಕ್ಕೂ ಮೊದಲು ಏಪ್ರಿಲ್ 14ರಂದು ಮಲ್ಲಿಕಾರ್ಜುನ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆದು ಏಪ್ರಿಲ್ 18ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಬಳಿಕ ಚಂದ್ರಶೇಖರ್ಗೆ ಸೇರಿದ ತೋಟದಲ್ಲಿ ಅವರನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿತ್ತು ಎನ್ನಲಾಗಿದೆ.
ಅಕ್ರಮ ದಂಧೆಯನ್ನು ಮುಚ್ಚಿಹಾಕುವ ಉದ್ದೇಶದಿಂದ ಮಲ್ಲಿಕಾರ್ಜುನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿ ಆಶಾ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪತ್ನಿಯ ದೂರಿನ ಆಧಾರದ ಮೇಲೆ ಪೊಲೀಸರು ಚಂದ್ರಶೇಖರ್ ಹಾಗೂ ಸದಾಶಿವ ನಾಯಕ ಎಂಬ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಚಂದ್ರಶೇಖರ್ ಪುತ್ರ ವಿನಾಯಕ್ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article