No menu items!
27.1 C
Munich
Friday, May 29, 2026

ಬೆಂಗಳೂರಿನಲ್ಲಿ ಹಳೆ ಪ್ರೇಮಿಯ ಜೊತೆ ಸುತ್ತಾಟ; ಹೊಸ ಪ್ರೇಮಿಯಿಂದ ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

Must read

ಬೆಂಗಳೂರಿನಲ್ಲಿ ಹಳೆ ಪ್ರೇಮಿಯ ಜೊತೆ ಸುತ್ತಾಟ; ಹೊಸ ಪ್ರೇಮಿಯಿಂದ ಯುವಕನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

ಬೆಂಗಳೂರು: ಸಿಲಿಕಾನ್ ಸಿಟಿಯ ಶಾಂತಿನಗರದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಗ್ಯಾಂಗ್ ಹಲ್ಲೆ ಪ್ರಕರಣಕ್ಕೆ ಇದೀಗ ಪ್ರೇಮಕಥೆಯ ಟ್ವಿಸ್ಟ್ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಮಾಜಿ ಪ್ರೇಮಿಯೊಂದಿಗೆ ಕಾರಿನಲ್ಲಿ ಸುತ್ತಾಡುತ್ತಿದ್ದ ವಿಚಾರ ತಿಳಿದ ಹಾಲಿ ಪ್ರೇಮಿ, ತನ್ನ ಸಹಚರರೊಂದಿಗೆ ಬಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ವಿಲ್ಸನ್ ಗಾರ್ಡನ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಸದ್ಯ ಹಲ್ಲೆಕೋರರ ಪೈಕಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ ಮೇ 22ರಂದು ಮುಂಜಾನೆ ಶಾಂತಿನಗರದ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಸುಮಾರು 6ರಿಂದ 7 ಜನರ ಗುಂಪು ಕಾರಿನಲ್ಲಿದ್ದ ಯುವಕನನ್ನು ಅಡ್ಡಗಟ್ಟಿ ಕೆಳಕ್ಕೆ ಎಳೆದು ರಸ್ತೆಯಲ್ಲೇ ಮನಬಂದಂತೆ ಹಲ್ಲೆ ನಡೆಸಿತ್ತು. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.
ತನಿಖೆ ವೇಳೆ ಹಲ್ಲೆಗೊಳಗಾದ ಅರ್ಫಾನ್ ಎಂಬ ಯುವಕನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಘಟನೆಯ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ.
ಅರ್ಫಾನ್ ಈ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಕೆಲ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರವಾಗಿದ್ದರು. ಬಳಿಕ ಆ ಯುವತಿ ಮಂಜು ಎಂಬಾತನೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದಳು.
ಆದರೆ ಇತ್ತೀಚೆಗೆ ಯುವತಿ ತನ್ನ ಹಾಲಿ ಪ್ರೇಮಿಗೆ ತಿಳಿಯದಂತೆ ಮತ್ತೆ ಅರ್ಫಾನ್ನ್ನು ಭೇಟಿಯಾಗಲು ಆರಂಭಿಸಿದ್ದಳು ಎನ್ನಲಾಗಿದೆ. ಮೇ 22ರಂದು ಮುಂಜಾನೆ ಇಬ್ಬರೂ ಶಾಂತಿನಗರದ ಬಳಿ ಕಾರಿನಲ್ಲಿ ಸುತ್ತಾಡುತ್ತಿದ್ದ ವೇಳೆ ಈ ವಿಚಾರ ಮಂಜುವಿಗೆ ತಿಳಿದಿದೆ.
ಇದರಿಂದ ಕೋಪಗೊಂಡ ಮಂಜು, ತನ್ನ ಸ್ನೇಹಿತರ ಗುಂಪಿನೊಂದಿಗೆ ಸ್ಥಳಕ್ಕೆ ಬಂದು ಅರ್ಫಾನ್ ಚಲಾಯಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾನೆ. ಬಳಿಕ ಅರ್ಫಾನ್ನ್ನು ಕಾರಿನಿಂದ ಕೆಳಕ್ಕೆ ಎಳೆದು ಸಾರ್ವಜನಿಕ ರಸ್ತೆಯಲ್ಲೇ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಗ್ಯಾಂಗ್ನಲ್ಲಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದು, ದಾಳಿಗೆ ಬಳಸಿದ್ದ ಕಾರನ್ನೂ ವಶಕ್ಕೆ ಪಡೆದಿದ್ದಾರೆ.
ಸದ್ಯ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಮಂಜು ಹಾಗೂ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ನಗರದ ಹೃದಯಭಾಗದಲ್ಲೇ ಮುಂಜಾನೆ ನಡೆದ ಈ ಗ್ಯಾಂಗ್ ದಾಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

- Advertisement -spot_img

More articles

- Advertisement -spot_img

Latest article