No menu items!
23.5 C
Munich
Sunday, May 31, 2026

ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ: ನಾಲ್ವರು ಮಹಿಳೆಯರು ಸೇರಿ ಐವರು ಸ್ಥಳದಲ್ಲೇ ಸಾವು

Must read

ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ: ನಾಲ್ವರು ಮಹಿಳೆಯರು ಸೇರಿ ಐವರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಸಮೀಪ ಭಾನುವಾರ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಆಟೋದಲ್ಲಿದ್ದ ನಾಲ್ವರು ಮಹಿಳೆಯರು ಹಾಗೂ ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಥಾರ್ ಕಾರು, ಆಟೋ ಹಾಗೂ ಕ್ಯಾಂಟರ್ ವಾಹನಗಳ ನಡುವೆ ಈ ಸರಣಿ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಥಾರ್ ಕಾರು ತನ್ನ ಮುಂದೆ ಸಂಚರಿಸುತ್ತಿದ್ದ ಆಟೋಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ತೀವ್ರತೆಗೆ ಆಟೋ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಅಪ್ಪಳಿಸಿದೆ. ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಹತ್ತಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯರು ಮತ್ತು ಪೊಲೀಸರು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -spot_img

More articles

- Advertisement -spot_img

Latest article