ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ: ಮೊಬೈಲ್ ಕೇಳಿದ ಪೊಲೀಸರಿಗೆ ಕೃಪಾ ಆಳ್ವ ಹೇಳಿದ್ದೇನು?
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಮುಂದುವರಿದಿದ್ದು, ಸಿಸಿಬಿ ಪೊಲೀಸರು ಕೃಪಾ ಆಳ್ವ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸ್ಟಿಂಗ್ ಕಾರ್ಯಾಚರಣೆಗೆ ಬಳಸಿದ್ದ ಮೊಬೈಲ್ ಫೋನ್ ನೀಡುವಂತೆ ಪೊಲೀಸರು ಕೇಳಿದಾಗ, ತಮ್ಮ ಬಳಿ ಅಂತಹ ಮೊಬೈಲ್ ಇಲ್ಲ ಎಂದು ಕೃಪಾ ಆಳ್ವ ಉತ್ತರಿಸಿರುವುದಾಗಿ ತಿಳಿದುಬಂದಿದೆ.
2022ರಲ್ಲಿ ಈ ಸ್ಟಿಂಗ್ ಆಪರೇಷನ್ ವಿಡಿಯೋ ರೆಕಾರ್ಡ್ ಆಗಿದೆ ಎಂಬ ಮಾಹಿತಿ ತನಿಖೆಯ ವೇಳೆ ಪೊಲೀಸರಿಗೆ ಲಭ್ಯವಾಗಿದೆ. ಆದರೆ, ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ಮೊಬೈಲ್ ಫೋನ್ ಅಥವಾ ಸ್ಟಿಂಗ್ ಕ್ಯಾಮೆರಾ ಇನ್ನೂ ಪತ್ತೆಯಾಗಿಲ್ಲ. ಅಷ್ಟೇ ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಅನ್ಎಡಿಟೆಡ್ ವಿಡಿಯೋ ತುಣುಕುಗಳೂ ಪೊಲೀಸರ ಕೈ ಸೇರಿಲ್ಲ.
ಹಳೆಯ ಮೊಬೈಲ್ ತಮ್ಮ ಬಳಿ ಇಲ್ಲ ಎಂದ ಕೃಪಾ ಆಳ್ವ
ಪ್ರಕರಣದ ವಿಚಾರಣೆಗಾಗಿ ಪದೇಪದೇ ಸಿಸಿಬಿ ಪೊಲೀಸರ ಮುಂದೆ ಹಾಜರಾಗುತ್ತಿರುವ ಕೃಪಾ ಆಳ್ವ, ಸ್ಟಿಂಗ್ ಆಪರೇಷನ್ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆ ಸಂದರ್ಭದಲ್ಲಿ ಬಳಸಿದ್ದ ಮೊಬೈಲ್ ಫೋನ್ ಈಗ ತಮ್ಮ ಬಳಿ ಇಲ್ಲ ಎಂಬ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಪ್ರಸ್ತುತ ತಾವು ಬಳಸುತ್ತಿರುವ ಮೊಬೈಲ್ ಫೋನ್ ಅನ್ನು ತನಿಖಾಧಿಕಾರಿಗಳಿಗೆ ನೀಡುವುದಾಗಿ ಕೃಪಾ ಆಳ್ವ ಭರವಸೆ ನೀಡಿದ್ದಾರೆ. ತನಿಖೆಯ ಮುಂದುವರಿದ ಭಾಗವಾಗಿ ಹಳೆಯ ಮೊಬೈಲ್ ಫೋನ್ ಅನ್ನು ಹುಡುಕಿ ನೀಡುವಂತೆ ಪೊಲೀಸರು ಅವರಿಗೆ ಸೂಚಿಸಿದ್ದಾರೆ.
ಪ್ರಶಾಂತ್, ರಾಕೇಶ್ ಶೆಟ್ಟಿಗೂ ಪೊಲೀಸರ ಸೂಚನೆ
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪ್ರಶಾಂತ್ ಮತ್ತು ರಾಕೇಶ್ ಶೆಟ್ಟಿ ಅವರಿಗೂ ಸಿಸಿಬಿ ಪೊಲೀಸರು ಮೊಬೈಲ್ ಫೋನ್ಗಳು ಹಾಗೂ ಅನ್ಎಡಿಟೆಡ್ ವಿಡಿಯೋ ತುಣುಕುಗಳನ್ನು ಒದಗಿಸುವಂತೆ ಕೇಳಿದ್ದಾರೆ.
ಸ್ಟಿಂಗ್ ಆಪರೇಷನ್ ನಡೆದ ಸಂದರ್ಭದಲ್ಲಿ ಬಳಸಿದ್ದ ಸಾಧನಗಳು ಮತ್ತು ಮೂಲ ವಿಡಿಯೋ ತುಣುಕುಗಳು ಇನ್ನೂ ಪತ್ತೆಯಾಗದಿರುವುದು ತನಿಖೆಗೆ ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಂದ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.



