ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ; ಅಧಿಕಾರದ ಚುಕ್ಕಾಣಿ ಹಿಡಿದ ಕನಕಪುರ ಬಂಡೆ
ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬೆಳೆಸಿದ ಹಿರಿಯ ನಾಯಕ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.
ಲೋಕಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ ನಡೆದ ಭವ್ಯ ಪ್ರಮಾಣವಚನ ಸಮಾರಂಭದಲ್ಲಿ ಥಾವರ್ಚಂದ್ ಗೆಹ್ಲೋಟ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಬೋಧಿಸಿದರು. ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದ ಡಿಕೆಶಿ, ತಮ್ಮ ಆರಾಧ್ಯ ದೈವ ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು, ರಾಜ್ಯದ ಹಿರಿಯ ರಾಜಕೀಯ ಮುಖಂಡರು, ಧಾರ್ಮಿಕ ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿರುವ ಕ್ಷಣಕ್ಕೆ ಸಾಕ್ಷಿಯಾಗಲು ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರು ಆಗಮಿಸಿ ಸಂಭ್ರಮಿಸಿದರು.
ಇದೇ ವೇಳೆ, ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕಾಗಿ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವಿಶೇಷ ಮುಹೂರ್ತ ನಿಗದಿಪಡಿಸಲಾಗಿತ್ತು ಎನ್ನಲಾಗಿದೆ. ತುಲಾ ಲಗ್ನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮಕ್ಕೆ ‘ಮಾಲವ್ಯ ಯೋಗ’ ಹೊಂದಿಕೆಯಾಗಿದ್ದು, ಇದು ರಾಜಕೀಯ ನಾಯಕತ್ವ ಹಾಗೂ ಆಡಳಿತದ ದೃಷ್ಟಿಯಿಂದ ಅತ್ಯಂತ ಶುಭಕರ ಯೋಗವೆಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯ ತಜ್ಞರ ಪ್ರಕಾರ, ಪ್ರಸ್ತುತ ಗ್ರಹಸ್ಥಿತಿಯಲ್ಲಿ ಗುರುಗ್ರಹ ಉಚ್ಚ ಸ್ಥಿತಿಯಲ್ಲಿದ್ದು, ದಶಮ ಭಾವ ಬಲಿಷ್ಠವಾಗಿರುವುದರಿಂದ ಆಡಳಿತಾತ್ಮಕ ನಿರ್ಧಾರಗಳಲ್ಲಿ ಯಶಸ್ಸು, ನಾಯಕತ್ವದಲ್ಲಿ ಸ್ಥಿರತೆ ಹಾಗೂ ಜನಪರ ಆಡಳಿತಕ್ಕೆ ಇದು ಪೂರಕವಾಗಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ.
ದೀರ್ಘ ರಾಜಕೀಯ ಪಯಣ, ಹಲವು ಸವಾಲುಗಳು ಮತ್ತು ಹೋರಾಟಗಳ ಬಳಿಕ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಡಿ.ಕೆ. ಶಿವಕುಮಾರ್ ಅವರ ಮುಂದಿನ ಆಡಳಿತದ ಮೇಲೆ ರಾಜ್ಯದ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಹೊಸ ಸರ್ಕಾರದ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳತ್ತ ಇದೀಗ ರಾಜ್ಯದ ಚಿತ್ತ ನೆಟ್ಟಿದೆ.



