ಭಾರತ ಮತ್ತು ಅಮೆರಿಕ ನಡುವೆ ಒಂದೆಡೆ ಮುಕ್ತ ವ್ಯಾಪಾರ ಒಪ್ಪಂದದ (FTA) ಮಾತುಕತೆಗಳು ಅಂತಿಮ ಹಂತ ತಲುಪಿರುವ ಬೆನ್ನಲ್ಲೇ, ವಾಷಿಂಗ್ಟನ್‌ನಿಂದ ಜಾಗತಿಕ ಮಾರುಕಟ್ಟೆಗೆ ಭಾರಿ ದೊಡ್ಡ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಬಲವಂತದ ಕಾರ್ಮಿಕ ಪದ್ಧತಿ (ಜೀತ ಪದ್ಧತಿ) ತಡೆಯಲು ವಿಫಲವಾಗಿರುವ ಹಿನ್ನೆಲೆ ಭಾರತ ಸೇರಿದಂತೆ ವಿಶ್ವದ ಕನಿಷ್ಠ 60 ವ್ಯಾಪಾರ ಪಾಲುದಾರ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಹೊಸ ಆಮದು ಸುಂಕಗಳನ್ನು ಹೇರಲು ಅಮೆರಿಕದ ಟ್ರಂಪ್ ಆಡಳಿತ ಮುಂದಾಗಿದೆ. ಅಮೆರಿಕ ವ್ಯಾಪಾರ ಪ್ರತಿನಿಧಿ (USTR) ಕಚೇರಿ ಈ ಆಘಾತಕಾರಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದು ಜಾಗತಿಕ ವಾಣಿಜ್ಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಯುಎಸ್‌ಟಿಆರ್ ಬಿಡುಗಡೆ ಮಾಡಿರುವ ಹೊಸ ಪ್ರಸ್ತಾವನೆಯ ಪ್ರಕಾರ, ಭಾರತದ ಮೇಲೆ ಬರೋಬ್ಬರಿ 12.5% ರಷ್ಟು ಗರಿಷ್ಠ ಹೆಚ್ಚುವರಿ ಆಮದು ಸುಂಕ ವಿಧಿಸಲು ನಿರ್ಧರಿಸಲಾಗಿದೆ. ಭಾರತದ ಜೊತೆಗೆ ಚೀನಾ, ಜಪಾನ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಸ್ವಿಟ್ಜರ್‌ಲ್ಯಾಂಡ್ ದೇಶಗಳಿಗೂ ಇದೇ 12.5% ಸುಂಕದ ಬಿಸಿ ತಟ್ಟಲಿದೆ.
ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಅಮೆರಿಕದ ನೆರೆಹೊರೆಯ ದೇಶಗಳಾದ ಕೆನಡಾ, ಮೆಕ್ಸಿಕೋ ಸೇರಿದಂತೆ ನಮ್ಮದೇ ನೆರೆಯ ಪಾಕಿಸ್ತಾನ, ಯುರೋಪಿಯನ್ ಒಕ್ಕೂಟ (EU), ಈಕ್ವೆಡಾರ್ ಮತ್ತು ಇಂಡೋನೇಷ್ಯಾ ದೇಶಗಳಿಗೆ ಕೇವಲ 10% ರಷ್ಟು ಕಡಿಮೆ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ. ಭಾರತಕ್ಕಿಂತ ಈ ದೇಶಗಳಿಗೆ ಕಡಿಮೆ ಸುಂಕ ವಿಧಿಸುತ್ತಿರುವುದು ಸದ್ಯ ಭಾರತೀಯ ರಫ್ತುದಾರರಲ್ಲಿ ಭಾರಿ ಆತಂಕ ಮೂಡಿಸಿದೆ.
ಅಮೆರಿಕ ಇಷ್ಟೊಂದು ಕಠಿಣ ನಿಲುವು ತಳೆಯಲು ಬಲವಂತದ ಕಾರ್ಮಿಕರ ಮೂಲಕ ಉತ್ಪಾದನೆಯಾಗುವ ಸರಕುಗಳ ಆಮದು ತಡೆಗೆ ಭಾರತ ಸೂಕ್ತ ಕಾನೂನು ಜಾರಿ ಮಾಡಿಲ್ಲ ಎಂಬ ನೆಪ ಒಡ್ಡಿದೆ. ಉಳಿದ ರಾಷ್ಟ್ರಗಳು ಅಮೆರಿಕದೊಂದಿಗೆ ‘ರೆಸಿಪ್ರೋಕಲ್ ಟ್ರೇಡ್ ಒಪ್ಪಂದ’ಕ್ಕೆ (ART) ಸಹಿ ಹಾಕಿ ಬದ್ಧತೆ ಪ್ರದರ್ಶಿಸಿದ್ದರೆ, ಭಾರತದ ಆರ್ಥಿಕ ನೀತಿಗಳು ಅಮೆರಿಕದ ವಾಣಿಜ್ಯ ವ್ಯವಹಾರಗಳಿಗೆ ಕಂಟಕ ತರುತ್ತಿವೆ ಎಂದು ಯುಎಸ್‌ಟಿಆರ್ ಗಂಭೀರ ಆರೋಪ ಮಾಡಿದೆ.
1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301 (ಬಿ) (1) ರ ಅಡಿಯಲ್ಲಿ ತನಿಖೆ ನಡೆಸಿದ ತಿಂಗಳುಗಳ ನಂತರ ವಾಷಿಂಗ್ಟನ್ ಈ ಆರ್ಥಿಕ ದಾಳಿ ನಡೆಸಲು ಮುಂದಾಗಿದೆ. ಈ ಹೊಸ ಸುಂಕದ ಮಾಸ್ಟರ್ ಪ್ಲಾನ್ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಪ್ರೀಂ ಕೋರ್ಟ್ ವಿಧಿಸಿರುವ ಸುಂಕಗಳ ಮೇಲಿನ ಮಿತಿಗಳನ್ನು ಬೈಪಾಸ್ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಈ ಭೀಕರ ಆರ್ಥಿಕ ಯುದ್ಧದ ಮುನ್ಸೂಚನೆಯಿಂದಾಗಿ ಭಾರತದ ದೇಶೀಯ ಮಾರುಕಟ್ಟೆಗೆ ಈಗಾಗಲೇ ಭಾರಿ ದೊಡ್ಡ ಪೆಟ್ಟು ಬಿದ್ದಿದೆ. ಅಮೆರಿಕದ ಕಠಿಣ ನಿಲುವಿನಿಂದಾಗಿ ಭಾರತದಿಂದ ವಿದೇಶಿ ನೇರ ಹೂಡಿಕೆಗಳು (FDI) ಭಾರಿ ಪ್ರಮಾಣದಲ್ಲಿ ಹೊರಹೋಗುತ್ತಿದ್ದು, ದಲ್ಲಾಳಿಗಳು ದಿಕ್ಕೆಟ್ಟು ಕೂತಿದ್ದಾರೆ.
ಕೇವಲ ಕಳೆದ ಒಂದು ವರ್ಷದಲ್ಲೇ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 12%ರಷ್ಟು ಭಾರಿ ಕುಸಿತ ಕಂಡಿದ್ದು, ಸದ್ಯ ರೂಪಾಯಿ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಅಂದರೆ 95 ರೂ. ಆಸುಪಾಸಿಗೆ ಬಂದು ತಲುಪಿರುವುದು ಆರ್ಥಿಕ ತಜ್ಞರ ನಿದ್ದೆಗೆಡಿಸಿದೆ. ಈ ಹಿಂದೆ ಭಾರತದ ಉತ್ಪನ್ನಗಳ ಮೇಲೆ 50%ರಷ್ಟು ಭಾರಿ ಸುಂಕ ಹೇರಿದ್ದಾಗಲೂ ಭಾರತಕ್ಕೆ ಭಾರಿ ನಷ್ಟವಾಗಿತ್ತು, ಆ ಬಳಿಕ ಅದನ್ನು 10%ಗೆ ಇಳಿಸಲಾಗಿದ್ದರೂ ಈಗ ಮತ್ತೆ 12.5% ಗೆ ಹೆಚ್ಚಿಸಲು ಪ್ರಸ್ತಾಪಿಸಿರುವುದು ದೊಡ್ಡ ಹೊರೆಯಾಗಿದೆ.
ಆದರೆ, ಈ ಹೊಸ ಸುಂಕಗಳು ತಕ್ಷಣವೇ ಜಾರಿಗೆ ಬರುತ್ತಿಲ್ಲ ಎಂಬುದು ಭಾರತಕ್ಕೆ ಸದ್ಯಕ್ಕೆ ಸಿಕ್ಕಿರುವ ಏಕೈಕ ಸಮಾಧಾನದ ಸಂಗತಿ. ಈ ಪ್ರಸ್ತಾಪಗಳು ಸಾರ್ವಜನಿಕ ಮತ್ತು ಪಾಲುದಾರ ರಾಷ್ಟ್ರಗಳ ಲಿಖಿತ ಅಭಿಪ್ರಾಯ ಹಾಗೂ ಪರಿಶೀಲನೆಗೆ ಮುಕ್ತವಾಗಿವೆ. ಜೂನ್ 22, 2026ರೊಳಗೆ ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಲು ವಿನಂತಿ ಸಲ್ಲಿಸಬಹುದು ಹಾಗೂ ಜುಲೈ 6, 2026 ರವರೆಗೆ ಲಿಖಿತ ಕಾಮೆಂಟ್‌ಗಳನ್ನು ನೀಡಲು ಕಾಲಾವಕಾಶವಿದೆ. ಇದಾದ ಬಳಿಕ ಜುಲೈ 7, 2026ರಂದು ಅಂತಿಮ ಸಾರ್ವಜನಿಕ ವಿಚಾರಣೆ ನಡೆಸಿ, ಸ್ವೀಕರಿಸಿದ ಸಾಕ್ಷ್ಯಗಳನ್ನು ಪರಿಗಣಿಸಿ ಯುಎಸ್‌ಟಿಆರ್ ಅಂತಿಮ ನಿರ್ಧಾರ ಪ್ರಕಟಿಸಲಿದ್ದು, ಜುಲೈನಿಂದಲೇ ಇವು ಅಧಿಕೃತವಾಗಿ ಜಾರಿಯಾಗುವ ಸಾಧ್ಯತೆಯಿದೆ.
ಅಮೆರಿಕದ ಈ ಬಿಗಿ ನಿಲುವಿನ ನಡುವೆಯೂ ಭಾರತ ಸರ್ಕಾರ ಮಾತ್ರ ಸಕಾರಾತ್ಮಕ ಭರವಸೆ ವ್ಯಕ್ತಪಡಿಸಿದೆ. ಸೆಕ್ಷನ್ 301 ಪ್ರಕ್ರಿಯೆಗಳ ಭಾಗವಾಗಿ ನವದೆಹಲಿ ನಿರಂತರವಾಗಿ ವಾಷಿಂಗ್ಟನ್ ಜೊತೆ ರಾಜತಾಂತ್ರಿಕ ಸಂಪರ್ಕದಲ್ಲಿದೆ. ಜವಳಿ ಮತ್ತು ಉಡುಪು ಉತ್ಪನ್ನಗಳಿಗೆ ವಿಶೇಷ ಕಾರ್ಯವಿಧಾನ ಹಾಗೂ ಸೆಕ್ಷನ್ 232ರ ಅಡಿಯಲ್ಲಿ ಬರುವ ಕೆಲವು ಆಯ್ದ ಉತ್ಪನ್ನಗಳಿಗೆ ಈ ಸುಂಕದ ಪ್ರಸ್ತಾಪದಿಂದ ವಿನಾಯಿತಿ ನೀಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಫೆಬ್ರವರಿ 2026 ರ ಜಂಟಿ ಹೇಳಿಕೆಗೆ ಅನುಗುಣವಾಗಿ, ಚೌಕಟ್ಟು ಒಪ್ಪಂದವನ್ನು ಅಂತಿಮಗೊಳಿಸಲು ಭಾರತ ಅಮೆರಿಕದೊಂದಿಗೆ ಸಮಾನಾಂತರವಾಗಿ ತೊಡಗಿಸಿಕೊಂಡಿದೆ.
ಈ ಇಡೀ ಆರ್ಥಿಕ ಹಗ್ಗಜಗ್ಗಾಟದ ನಡುವೆ ಭಾರತಕ್ಕೆ ಅಮೆರಿಕದ ರಾಯಭಾರಿ ಆಗಿರುವ ಸೆರ್ಗಿಯೊ ಗೋರ್ ನೀಡಿರುವ ಹೇಳಿಕೆ ಭಾರಿ ಭರವಸೆ ಮೂಡಿಸಿದೆ. “ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಶೇ. 99ರಷ್ಟು ಮುಕ್ತಾಯಗೊಂಡಿದೆ. ಶೀಘ್ರದಲ್ಲೇ ಅಂತಿಮ ಒಪ್ಪಂದ ಸಿದ್ಧವಾಗಲಿದ್ದು, ಇದು ಅಮೆರಿಕ ಮತ್ತು ಭಾರತ ಎರಡೂ ದೇಶಗಳಿಗೂ ದೊಡ್ಡ ಗೆಲುವಿನ ಸನ್ನಿವೇಶವಾಗಲಿದೆ (Win-Win Situation) ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ಸುಂಕದ ಬೆದರಿಕೆಯನ್ನು ಭಾರತ ಹೇಗೆ ಹತ್ತಿಕ್ಕಲಿದೆ ಮತ್ತು ಮುಂಬರುವ ಜುಲೈ ತಿಂಗಳ ಒಳಗೆ ತನ್ನ ಆರ್ಥಿಕ ಹಿತಾಸಕ್ತಿಯನ್ನು ಹೇಗೆ ಕಾಪಾಡಿಕೊಳ್ಳಲಿದೆ ಎಂಬುದನ್ನು ಇಡೀ ಜಗತ್ತೇ ಕುತೂಹಲದಿಂದ ನೋಡುತ್ತಿದೆ.



