ಮುಂಬೈ: ಇದು ಬಣ್ಣದ ಲೋಕ, ಇಲ್ಲಿ ಹಗಲು-ರಾತ್ರಿ ಅನ್ನೋ ಹಂಗಿಲ್ಲದೆ ದಿನಕ್ಕೊಂದು ಗಾಸಿಪ್‌ಗಳು ಹರಿದಾಡುತ್ತಲೇ ಇರುತ್ತವೆ. ಕೆಲವು ಸುದ್ದಿಗಳು ನಿಜವಾಗಿದ್ದರೆ, ಇನ್ನು ಕೆಲವು ಕೇವಲ ಗಾಳಿ ಸುದ್ದಿಯಾಗಿ ಹಾರಿಹೋಗುತ್ತವೆ. ಚಿತ್ರರಂಗದ ಸ್ಟಾರ್ ನಟ-ನಟಿಯರ ಲವ್, ಬ್ರೇಕಪ್, ಮದುವೆ ಹಾಗೂ ಡಿವೋರ್ಸ್ ವಿಚಾರಗಳಂತೂ ಇಲ್ಲಿ ನಿತ್ಯ ನಿರಂತರ. ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಮೇಲೆ ಸದಾ ಒಂದು ವರ್ಗ ಕಣ್ಣಿಟ್ಟಿರುತ್ತದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಅಮೀರ್ ಖಾನ್ ತಮ್ಮ 61ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಬಿಸಿಬಿಸಿ ಸುದ್ದಿ ಬಿ-ಟೌನ್ ಅಖಾಡದಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಅಮೀರ್ ಖಾನ್ ಇದೇ ಜುಲೈ 5ರಂದು ಸರಳವಾಗಿ ವಿವಾಹವಾಗಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್, ಗೌರಿ ಜೊತೆಗಿನ ಪ್ರೀತಿಯನ್ನು ಮಾಧ್ಯಮಗಳ ಮುಂದೆ ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಅದಕ್ಕೂ ಒಂದು ವರ್ಷದ ಮೊದಲಿನಿಂದಲೇ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು. ಗೌರಿ ಸ್ಪ್ರ್ಯಾಟ್ ಹಾಗೂ ಅಮೀರ್ ಖಾನ್ ಕಳೆದ 25 ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ಸುದೀರ್ಘ ಸ್ನೇಹದ ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿದೆ.
ಮಾಧ್ಯಮ ವರದಿಗಳ ಪ್ರಕಾರ, ಈ ಜೋಡಿಯು ಯಾವುದೇ ಅದ್ದೂರಿ ವಿವಾಹ ಮಹೋತ್ಸವ ಅಥವಾ ಗ್ರ್ಯಾಂಡ್ ರಿಸೆಪ್ಷನ್ ಹಮ್ಮಿಕೊಳ್ಳುತ್ತಿಲ್ಲ. ಕೇವಲ ಅತ್ಯಾಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಜುಲೈ 5ರಂದು ಸರಳವಾಗಿ ಕೋರ್ಟ್ ಮ್ಯಾರೇಜ್ (ನೋಂದಾಯಿತ ವಿವಾಹ) ಮಾಡಿಕೊಳ್ಳುವ ಮೂಲಕ ತಮ್ಮ ದಾಂಪತ್ಯ ಜೀವನವನ್ನು ಅಧಿಕೃತಗೊಳಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಮೀರ್ ಮತ್ತು ಗೌರಿ ಕಳೆದ ಒಂದು ವರ್ಷದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದು, ಒಟ್ಟಿಗೆ ಖುಷಿಯಾದ ಜೀವನ ನಡೆಸುತ್ತಿದ್ದಾರೆ. ಈಗ ತಮ್ಮ ಈ ಸಂಬಂಧಕ್ಕೆ ಕುಟುಂಬದವರ ಸಮ್ಮುಖದಲ್ಲಿ ಕಾನೂನಾತ್ಮಕ ಮುದ್ರೆ ಒತ್ತಲು ನಿರ್ಧರಿಸಿದ್ದಾರೆ.
ಅತ್ಯಂತ ಖಾಸಗಿಯಾಗಿ ನಡೆಯಲಿರುವ ಈ ವಿವಾಹ ಸಮಾರಂಭ ಅಮೀರ್ ಖಾನ್ ಅವರ ಮುಂಬೈ ನಿವಾಸದಲ್ಲೇ ನಡೆಯಲಿದ್ದು, ಕೆಲವೇ ಕೆಲವು ಆಪ್ತ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿದೆ. ಅಮೀರ್ ಅವರ ಆಪ್ತ ಗೆಳೆಯರಾದ ಸೂಪರ್ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಈ ಮದುವೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಅಮೀರ್ ಅವರ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಕೂಡ ಈ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎನ್ನಲಾಗಿದೆ. ವಿಚ್ಛೇದನದ ಬಳಿಕವೂ ಇವರೆಲ್ಲರ ನಡುವೆ ಉತ್ತಮ ಬಾಂಧವ್ಯ ಮುಂದುವರಿದಿದೆ.
ವಯಸ್ಸಿನ ಅಂತರದ ವಿಚಾರಕ್ಕೆ ಬಂದರೆ, ಗೌರಿ ಸ್ಪ್ರ್ಯಾಟ್ ಅವರಿಗೆ ಈಗ 47 ವರ್ಷ ವಯಸ್ಸು ಎನ್ನಲಾಗಿದ್ದು, ಅಮೀರ್ ಹಾಗೂ ಗೌರಿ ನಡುವೆ ಸುಮಾರು 14 ವರ್ಷಗಳ ಅಂತರವಿದೆ. ಗೌರಿ ಅವರಿಗೆ ಈಗಾಗಲೇ ಹಿಂದಿನ ಮದುವೆಯಿಂದ 7 ವರ್ಷದ ಮಗನಿದ್ದಾನೆ. ಅಮೀರ್ ಖಾನ್‌ಗೆ ಮೊದಲ ಪತ್ನಿ ರೀನಾ ದತ್ತಾ ಅವರಿಂದ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದರೆ, ಎರಡನೇ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ. ಈಗಾಗಲೇ ಮಗಳು ಇರಾ ವಿವಾಹವಾಗಿದ್ದು, ಮಗ ಜುನೈದ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕಳೆದ ವರ್ಷ ಮಾಧ್ಯಮಗಳ ಮುಂದೆ ತಮ್ಮ ಪ್ರೇಯಸಿ ಗೌರಿ ಅವರನ್ನು ಪರಿಚಯಿಸಿದಾಗ, ಮದುವೆಯ ಪ್ರಶ್ನೆಗೆ ಉತ್ತರಿಸಿದ್ದ ಅಮೀರ್ ಖಾನ್, “ನಮ್ಮ ನಡುವೆ ಪೂರ್ಣ ಬದ್ಧತೆಯಿದೆ. ಆದರೆ 60ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗುವುದು ಅಷ್ಟೊಂದು ಚೆನ್ನಾಗಿರಲ್ಲ ಅನಿಸುತ್ತೆ, ಜನ ನಗಬಹುದು” ಎಂದು ತಮಾಷೆ ಮಾಡಿದ್ದರು. ಆದಾಗ್ಯೂ, ಸಂದರ್ಭಕ್ಕೆ ತಕ್ಕಂತೆ ಇದರ ಬಗ್ಗೆ ಆಲೋಚಿಸುವುದಾಗಿ ಹೇಳಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, “ನನ್ನ ಜೀವನಕ್ಕೆ ಗೌರಿ ಬಂದಿರುವುದು ನನ್ನ ಅದೃಷ್ಟ. ಅವಳ ಜೊತೆ ಇದ್ದರೆ ನನಗೆ ನೆಮ್ಮದಿ ಸಿಗುತ್ತದೆ. ಈಗ ನಾನು ಪರಿಪೂರ್ಣನಾಗಿದ್ದೇನೆ ಎನಿಸುತ್ತಿದೆ” ಎಂದು ಭಾವನಾತ್ಮಕವಾಗಿ ಹಂಚಿಕೊಂಡಿದ್ದರು.
ಒಟ್ಟಿನಲ್ಲಿ ಜುಲೈ 5ರಂದು ಅಮೀರ್ ಖಾನ್ ಮತ್ತು ಗೌರಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಭಾರಿ ಜೋರಾಗಿ ಕೇಳಿಬರುತ್ತಿವೆ. ಈ ಸ್ಟಾರ್ ನಟನ ಮೂರನೇ ಇನಿಂಗ್ಸ್ ಯಶಸ್ವಿಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಆದರೂ ಈ ಇಬ್ಬರೂ ಕೂಡ ತಮ್ಮ ಮದುವೆಯ ಅಧಿಕೃತ ಸುದ್ದಿಯ ಮೇಲೆ ಸದ್ಯದಲ್ಲೇ ಅಂತಿಮ ಮುದ್ರೆ ಒತ್ತಬೇಕಿದೆ.



