ರಾಜ್ಯಸಭೆ ಟಿಕೆಟ್ ಮೇಲೆ ಸುಮಲತಾ ಕಣ್ಣು; ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೆಚ್ಚಿಸಿದ ಬೆಂಬಲಿಗರು
ಮಂಡ್ಯ: ಕಳೆದ ಕೆಲವು ಸಮಯದಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮತ್ತೆ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಲು ಸಿದ್ಧತೆ ನಡೆಸುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಮುಂಬರುವ ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ರಾಜ್ಯಸಭೆ ಟಿಕೆಟ್ಗಾಗಿ ಪ್ರಯತ್ನ ಆರಂಭಿಸಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.
ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಕೆಲವೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಸುಮಲತಾ ಅಂಬರೀಶ್, ಪ್ರಮುಖ ರಾಜಕೀಯ ಅಥವಾ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆದರೆ ರಾಜ್ಯಸಭೆ ಚುನಾವಣೆಯ ಸನ್ನಿವೇಶ ನಿರ್ಮಾಣವಾಗುತ್ತಿದ್ದಂತೆ ಅವರ ಹೆಸರು ಮತ್ತೆ ರಾಜಕೀಯ ವಲಯದಲ್ಲಿ ಕೇಳಿಬರತೊಡಗಿದೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಹೈಕಮಾಂಡ್ ಮನವಿ ಹಾಗೂ ಪಕ್ಷದ ನಾಯಕರ ಸಲಹೆ ಮೇರೆಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಬಿಟ್ಟುಕೊಟ್ಟಿದ್ದರು. ಆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಮತ್ತು ಗೌರವ ನೀಡುವುದಾಗಿ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.
ಆದರೆ ಕ್ಷೇತ್ರ ತ್ಯಾಗದ ಬಳಿಕ ಪಕ್ಷದಿಂದ ನಿರೀಕ್ಷಿತ ಅವಕಾಶ ದೊರೆತಿಲ್ಲ ಎಂಬ ಅಸಮಾಧಾನ ಸುಮಲತಾ ಬೆಂಬಲಿಗರ ವಲಯದಲ್ಲಿ ವ್ಯಕ್ತವಾಗುತ್ತಿದೆ. ತಮ್ಮ ನಾಯಕಿಗೆ ನೀಡಿದ ಭರವಸೆಯನ್ನು ಬಿಜೆಪಿ ಈಡೇರಿಸಬೇಕು ಹಾಗೂ ರಾಜ್ಯಸಭೆಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಈ ಹಿನ್ನೆಲೆಯಲ್ಲಿ ಸುಮಲತಾ ಬೆಂಬಲಿಗರು ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ ಅವರನ್ನು ಭೇಟಿ ಮಾಡಿ ರಾಜ್ಯಸಭೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಇದುವರೆಗೆ ರಾಜಕೀಯವಾಗಿ ಮೌನ ವಹಿಸಿದ್ದ ಸುಮಲತಾ ಅಂಬರೀಶ್, ಬೆಂಬಲಿಗರ ಮೂಲಕ ತಮ್ಮ ಬೇಡಿಕೆಯನ್ನು ಪಕ್ಷದ ನಾಯಕತ್ವದ ಗಮನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ರಾಜ್ಯಸಭೆ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಬಿಜೆಪಿ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.



