ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಪತ್ತೆ; ಸಿಸಿಬಿಯಿಂದ ತನಿಖೆ
ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಮಂಗಳವಾರ ಸಿಸಿಬಿ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ವೇಳೆ ಮೊಬೈಲ್ ಪತ್ತೆಯಾಗಿದ್ದು, ಜೈಲಿನಲ್ಲಿ ಹೈಪ್ರೊಫೈಲ್ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಮತ್ತಷ್ಟು ಬಲ ಬಂದಿದೆ.
ಮಂಗಳವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಸಂಕೀರ್ಣದಲ್ಲಿ ದಿಢೀರ್ ಪರಿಶೀಲನೆ ನಡೆಸಿದ್ದರು. ಈ ವೇಳೆ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ನಿಷೇಧಿತ ಮೊಬೈಲ್ ಫೋನ್ ಪತ್ತೆಯಾಗಿದೆ.
ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಅವರೊಂದಿಗೆ ಮತ್ತೊಬ್ಬ ಸಜಾಬಂಧಿ ಪ್ರತಾಪ್ ರೈ ಕೂಡ ವಾಸವಾಗಿದ್ದರು ಎನ್ನಲಾಗಿದೆ. ತಪಾಸಣೆ ವೇಳೆ ಮೊಬೈಲ್ ಪತ್ತೆಯಾಗಿದ್ದು, ಅದನ್ನು ಪ್ರಜ್ವಲ್ ರೇವಣ್ಣ ಬಳಸುತ್ತಿದ್ದರೇ ಅಥವಾ ಪ್ರತಾಪ್ ರೈ ಅವರ ಬಳಕೆಯಲ್ಲಿತ್ತೇ ಎಂಬುದರ ಕುರಿತು ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೈಲಿನೊಳಗೆ ನಿಷೇಧಿತ ಮೊಬೈಲ್ ಹೇಗೆ ಪ್ರವೇಶಿಸಿತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಅತ್ಯಂತ ಬಿಗಿ ಭದ್ರತೆಯ ಕೇಂದ್ರ ಕಾರಾಗೃಹದಲ್ಲಿ ಹೈಪ್ರೊಫೈಲ್ ಕೈದಿಯೊಬ್ಬರ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಜೈಲು ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಹಿಂದೆ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಭಾವಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೀಗ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಆ ಆರೋಪಗಳಿಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ 36 ವರ್ಷದ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.



