ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಮರ್ಷಿಯಲ್ ಚಿತ್ರಗಳದ್ದೇ ಚಿತ್ರರಂಗದಲ್ಲಿ ಹಾವಳಿ. ಯೂಟ್ಯೂಬ್ ಟ್ರೆಂಡ್‌ಗಳ ಹೆಸರಿನಲ್ಲಿ ಅಬ್ಬರದ ರಾಪ್ ಸಾಂಗ್ಸ್ ಹಾಗೂ ದ್ವಂದ್ವಾರ್ಥದ ಹಾಡುಗಳೇ ಎಲ್ಲೆಡೆ ಧೂಳೆಬ್ಬಿಸುತ್ತಿವೆ. ಕೇವಲ ವೀವ್ಸ್ ಮತ್ತು ಲೈಕ್ಸ್ ಬೆನ್ನತ್ತಿರುವ ಇಂದಿನ ಮಾರುಕಟ್ಟೆಯಲ್ಲಿ, ಯುವ ಪೀಳಿಗೆಯನ್ನು ದಾರಿ ತಪ್ಪಿಸುವಂತಹ ಹಾಗೂ ಕಿವಿಗೆ ಕಿರಿಕಿರಿ ಉಂಟುಮಾಡುವಂತಹ ಸಂಗೀತವೇ ಹೆಚ್ಚಾಗಿ ಮುಂಚೂಣಿಗೆ ಬರುತ್ತಿದೆ.
ಇಂತಹ ಒಂದು ಕಾಲದಲ್ಲಿ, ಇಡೀ ಸಮಾಜಕ್ಕೆ ಸನ್ಮಾರ್ಗ ಹಾಗೂ ಮನಸ್ಸಿಗೆ ನೆಮ್ಮದಿ ನೀಡಬಲ್ಲ ಭಕ್ತಿ ಪ್ರಧಾನವಾದ ಹಾದಿಯನ್ನು ಆಯ್ದುಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲು. ಆದರೆ, ಈ ಎಲ್ಲಾ ಕಮರ್ಷಿಯಲ್ ಗಲಾಟೆಗಳ ನಡುವೆಯೂ ಭಕ್ತಿ ಮತ್ತು ಸಂಸ್ಕಾರವನ್ನು ಯುವಮನಸ್ಸುಗಳಿಗೆ ತಲುಪಿಸಲೇಬೇಕು ಎಂದು ಪಣತೊಟ್ಟಿರುವ ರಘು ಭಟ್ ನೇತೃತ್ವದ ತಂಡ ಸದ್ಯ ”ರಾಯರ ದರ್ಶನ” ಆಲ್ಬಂ ಹಾಡನ್ನು ನಿಮ್ಮೆಲ್ಲರ ಮಡಿಲಿಗೆ ಹಾಕಲು ಸಿದ್ಧವಾಗಿದೆ.

ಹೌದು, ಕೋಟಿ ಭಕ್ತರ ಆರಾಧ್ಯ ದೈವ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರುವ “ರಾಯರ ದರ್ಶನ” ಎಂಬ ಅದ್ಭುತ ಆಲ್ಬಮ್ ಸಾಂಗ್ ಬಿಡುಗಡೆಗೆ ಇದೀಗ ಕೌಂಟ್‌ಡೌನ್ ಶುರುವಾಗಿದೆ. ಮಂತ್ರಾಲಯದ ಪವಿತ್ರ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಇದೇ ಜೂನ್ 26 ರಂದು ಅತ್ಯಂತ ಸಡಗರ-ಸಂಭ್ರಮದಿಂದ ಈ “ರಾಯರ ದರ್ಶನ” ಆಲ್ಬಮ್ ಸಾಂಗ್ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ತುಮಕೂರಿನ ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ಭಕ್ತಿಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆಮಂತ್ರಣ ಪತ್ರಿಕೆಯನ್ನು ನೀಡಿ, ಕಾರ್ಯಕ್ರಮಕ್ಕೆ ಸಾನ್ನಿಧ್ಯ ವಹಿಸಬೇಕೆಂದು ಇಡೀ ತಂಡ ವಿನಂತಿಸಿಕೊಂಡಿದೆ.
ಕೇವಲ ಶ್ರೀ ಶ್ರೀ ಸಿದ್ದಲಿಂಗಾ ಮಹಾಸ್ವಾಮಿಗಳು ಮಾತ್ರವಲ್ಲದೇ ನೋಣವಿನಕೆರೆ ಮಠದ ಶ್ರೀ ಶ್ರೀ ಕರಿವೃಷಭ ಶಿವ ಯೋಗೀಶ್ವರ ಸ್ವಾಮೀಜಿ ಅವರನ್ನು ಕೂಡ ತಂಡ, ಅತ್ಯಂತ ಭಕ್ತಿ ಮತ್ತು ಕೃತಜ್ಞತೆಯಿಂದ, ಜೂನ್ 26, 2026 ರಂದು ನಡೆಯಲಿರುವ ”ರಾಯರ ದರ್ಶನ” ಆಲ್ಬಮ್ ಸಾಂಗ್‌ನ ಬಿಡುಗಡೆ ಸಮಾರಂಭಕ್ಕೆ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡಿದಿದೆ.

ಮಂತ್ರಾಲಯ ಮಠದ ಪ್ರಮುಖರಾದ ಶ್ರೀಶಾ ಜೋಯಿಶ್, ಶ್ರೀಮತಿ ಅಭಿಜ್ಞಾ ಶ್ರೀಶ, ಈ ಹಾಡಿನ ರೂವಾರಿಗಳಾದ ರಘು ಭಟ್ ಮತ್ತು ಶ್ರೀಮತಿ ಸುಗುಣ ರಘು ಭಟ್ ಅವರ ಜೊತೆ ತೆರಳಿ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಮತ್ತು ಶ್ರೀ ಶ್ರೀ ಕರಿವೃಷಭ ಶಿವ ಯೋಗೀಶ್ವರ ಸ್ವಾಮೀಜಿ ಅವರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿದ್ದು ವಿಶೇಷ.
ಇವರ ಜೊತೆಗೆ ತಿಪಟೂರಿನ ಹಿರಿಯ ಪತ್ರಕರ್ತ ಹಾಗೂ ಕಿರುತೆರೆ ನಟರಾದ ಶ್ರೀ ದಯಾನಂದ ಸಾಗರ್ ಅವರು ಕೂಡ ಉಪಸ್ಥಿತರಿದ್ದು, ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮದ ಯಶಸ್ಸಿಗೆ ಸಾಥ್ ನೀಡಿದರು. ಶ್ರೀ ಸಿದ್ಧಗಂಗಾ ಮಠದ ಶ್ರೀಗಳ ಆಶೀರ್ವಾದದೊಂದಿಗೆ ಈ ಆಲ್ಬಮ್ ಸಾಂಗ್ ಬಿಡುಗಡೆಯ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು ಇದೇ ಜೂನ್ 26ರಂದು ಮಂತ್ರಾಲಯದಲ್ಲಿ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಅಂದ್ಹಾಗೇ ”ರಾಯರ ದರ್ಶನ” ಆಲ್ಬಂ ಸಾಂಗ್‌ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ನಾಗಾರ್ಜುನ ಶರ್ಮಾ ಅವರ ಭಾವಪೂರ್ಣ ಸಾಹಿತ್ಯವಿದೆ. ಶ್ರೀನಿಧಿ ಎಂ.ಕೆ. ಮತ್ತು ಖುಷಿ ಪ್ರಾಜೆಕ್ಟ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಸುಗುಣ ಭಟ್ ಮತ್ತು ರಘು ಭಟ್ ಅವರ ದೊಡ್ಡ ಕನಸಿನ ಕೂಸಾಗಿರುವ ಈ ಹಾಡನ್ನು ಸುಗುಣ ಭಟ್ ಭಕ್ತಿಪೂರ್ವಕವಾಗಿ ನಿರ್ಮಾಣ ಮಾಡಿದ್ದರೆ, ರಘು ಭಟ್ ಅವರು ಅತ್ಯಂತ ಸಿನಿಮೀಯ ಶೈಲಿಯಲ್ಲಿ ನಿರ್ದೇಶನ ಮಾಡಿದ್ದಾರೆ.
ಒಟ್ನಲ್ಲಿ ಮಂತ್ರಾಲಯದ ರಾಯರ ದಿವ್ಯ ಮಹಿಮೆಯನ್ನು ಮತ್ತು ಭಕ್ತಿಯ ಶಕ್ತಿಯನ್ನು ಇಂದಿನ ಜನರ ಮನೆಮನಗಳಿಗೆ ತಲುಪಿಸಲು ಹೊರಟಿರುವ ಈ ತಂಡದ ಪ್ರಯತ್ನಕ್ಕೆ ಸದ್ಯ ಸಾರ್ವಜನಿಕ ವಲಯದಲ್ಲಿ ಮತ್ತು ಚಿತ್ರರಂಗದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಜೂನ್ 26ರಂದು ಮಂತ್ರಾಲಯದ ಪವಿತ್ರ ಮಣ್ಣಿನಲ್ಲಿ ಲೋಕಾರ್ಪಣೆಗೊಳ್ಳಲಿರುವ “ರಾಯರ ದರ್ಶನ” ಭಕ್ತಿಗೀತೆಯು ಸಂಗೀತ ಲೋಕದಲ್ಲಿ ಒಂದು ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂಬ ಭರವಸೆಯೂ ಕೂಡ ಚಿತ್ರರಂಗಕ್ಕಿದೆ.



