ಡೀಸೆಲ್ ಮಾರಾಟಕ್ಕೆ ಕೇಂದ್ರದ ಹೊಸ ನಿಯಮ: ದಿನಕ್ಕೆ ಒಂದು ವಾಹನಕ್ಕೆ 200 ಲೀಟರ್ ಮಾತ್ರ
ನವದೆಹಲಿ: ಡೀಸೆಲ್ನ ಅಕ್ರಮ ದಾಸ್ತಾನು ಹಾಗೂ ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪೆಟ್ರೋಲ್ ಬಂಕ್ಗಳಲ್ಲಿ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿಸಲು ಮಿತಿ ವಿಧಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ವಾಣಿಜ್ಯ, ಕೈಗಾರಿಕಾ ಹಾಗೂ ಸಾಂಸ್ಥಿಕ ಬಳಕೆದಾರರು ಇನ್ನು ಮುಂದೆ ಸಾಮಾನ್ಯ ರಿಟೇಲ್ ಪೆಟ್ರೋಲ್ ಬಂಕ್ಗಳಿಂದ ಡೀಸೆಲ್ ಖರೀದಿಸಲು ಅವಕಾಶ ಇರುವುದಿಲ್ಲ. ಇಂತಹ ಗ್ರಾಹಕರು ವಾಣಿಜ್ಯ ಉದ್ದೇಶಕ್ಕಾಗಿ ನಿಗದಿಪಡಿಸಲಾದ ವಿಶೇಷ ಮಾರಾಟ ಕೇಂದ್ರಗಳಿಂದಲೇ ಇಂಧನ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಪ್ರಸ್ತುತ ರಿಟೇಲ್ ಪೆಟ್ರೋಲ್ ಬಂಕ್ಗಳಲ್ಲಿ ಡೀಸೆಲ್ ದರ ಲೀಟರ್ಗೆ ₹95.20 ಇದ್ದರೆ, ಬೃಹತ್ ಪ್ರಮಾಣದ ಮಾರಾಟ ಕೇಂದ್ರಗಳಲ್ಲಿ ಇದರ ಬೆಲೆ ₹134.50 ಇದೆ. ಕಡಿಮೆ ದರದ ಕಾರಣದಿಂದ ಭಾರೀ ವಾಹನಗಳ ಮಾಲೀಕರು ಹಾಗೂ ವಾಣಿಜ್ಯ ಬಳಕೆದಾರರು ಸಾಮಾನ್ಯ ಪೆಟ್ರೋಲ್ ಬಂಕ್ಗಳತ್ತ ಹೆಚ್ಚಿನ ಪ್ರಮಾಣದಲ್ಲಿ ಮುಖ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ ಈ ಕ್ರಮ ಜಾರಿಗೊಳಿಸಲಾಗಿದೆ.
ಇನ್ನು ಮುಂದೆ ರಿಟೇಲ್ ಬಂಕ್ಗಳಲ್ಲಿ ಡೀಸೆಲ್ ಅನ್ನು ವಾಹನದ ಇಂಧನ ಟ್ಯಾಂಕ್ಗೆ ಮಾತ್ರ ತುಂಬಿಸಬೇಕು. ಕ್ಯಾನ್, ಬ್ಯಾರೆಲ್ ಅಥವಾ ಇತರೆ ಪಾತ್ರೆಗಳಲ್ಲಿ ಡೀಸೆಲ್ ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಅನುಮೋದಿಸಿರುವ ವಿಶೇಷ ಕ್ಯಾನ್ಗಳಲ್ಲಿ ಮಾತ್ರ ಡೀಸೆಲ್ ಖರೀದಿಸಲು ಅವಕಾಶ ನೀಡಲಾಗಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗಿದ್ದು, ಹಲವು ದೇಶಗಳಲ್ಲಿ ಇಂಧನ ಲಭ್ಯತೆಯ ಕುರಿತು ಆತಂಕ ವ್ಯಕ್ತವಾಗಿದೆ. ಭಾರತದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಾಮಾನ್ಯ ಗ್ರಾಹಕರಿಗೆ ಇಂಧನ ಕೊರತೆ ಉಂಟಾಗದಂತೆ ಈ ನಿಯಂತ್ರಣ ಕ್ರಮ ಜಾರಿಗೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.



