No menu items!
30.8 C
Munich
Sunday, June 21, 2026

ಮಹಿಳಾ ಟಿ20 ವಿಶ್ವಕಪ್ʼನಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್!

Must read

ಮಹಿಳಾ ಟಿ20 ವಿಶ್ವಕಪ್ʼನಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್!

ಮುಂಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿರುವ ಭಾರತ ಮಹಿಳಾ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಪ್ರಮುಖ ಸ್ಪಿನ್ನರ್ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಪಾದದ ಗಾಯದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಶ್ರೇಯಾಂಕಾ ಅವರಿಗೆ ಸಂಪೂರ್ಣ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿರುವ ಹಿನ್ನೆಲೆಯಲ್ಲಿ ಉಳಿದ ಎಲ್ಲಾ ವಿಶ್ವಕಪ್ ಪಂದ್ಯಗಳಿಂದ ಅವರನ್ನು ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಬುಧವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕಾ ಬೌಲಿಂಗ್ ಮಾಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ತಮ್ಮ ಮೊದಲ ಓವರ್ನ ಮೊದಲ ಎಸೆತದ ಬಳಿಕ ಮಿಡ್ವಿಕೆಟ್ ದಿಕ್ಕಿನಲ್ಲಿ ಹೊಡೆದ ಚೆಂಡನ್ನು ತಡೆಯಲು ಯತ್ನಿಸಿದಾಗ ಕಾಲು ಜಾರಿ ಬಿದ್ದು ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದರೂ ಅವರು ಪಂದ್ಯವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಶ್ರೇಯಾಂಕಾ ಅವರ ಸ್ಥಾನಕ್ಕೆ ಯುವ ಆಟಗಾರ್ತಿ ಪ್ರೇಮಾ ರಾವತ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಬದಲಾವಣೆಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ತಾಂತ್ರಿಕ ಸಮಿತಿಯೂ ಅನುಮೋದನೆ ನೀಡಿದೆ. ಐಸಿಸಿ ನಿಯಮಗಳ ಪ್ರಕಾರ ಟೂರ್ನಿಯ ಮಧ್ಯೆ ಯಾವುದೇ ಆಟಗಾರ್ತಿಯ ಬದಲಾವಣೆಗೆ ತಾಂತ್ರಿಕ ಸಮಿತಿಯ ಅನುಮತಿ ಕಡ್ಡಾಯವಾಗಿದೆ.
24 ವರ್ಷದ ಪ್ರೇಮಾ ರಾವತ್ ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಹಾಗೂ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಅವರು ಉತ್ತಮ ಆಟ ಪ್ರದರ್ಶಿಸಿದ್ದರು.
ಏಷ್ಯಾ ಕಪ್ನಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸಿದ್ದ ಪ್ರೇಮಾ ರಾವತ್ 9.62ರ ಸರಾಸರಿಯಲ್ಲಿ 8 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಳೆದ ಎರಡು ಡಬ್ಲ್ಯುಪಿಎಲ್ ಸೀಸನ್ಗಳಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿದ್ದು, 3 ವಿಕೆಟ್ ಕಬಳಿಸಿದ್ದಾರೆ.
ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ಭಾರತ ತಂಡಕ್ಕೆ ಮರಳಿದ್ದ ಶ್ರೇಯಾಂಕಾ ಪಾಟೀಲ್ಗೆ ಇದು ಮತ್ತೊಂದು ಹಿನ್ನಡೆಯಾಗಿದೆ. ಇದೇ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಮೂರು ಓವರ್ಗಳಲ್ಲಿ ಕೇವಲ 17 ರನ್ ನೀಡಿ ಉತ್ತಮ ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿದ್ದರು. ಆದರೆ ಈಗ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿರುವುದು ಭಾರತ ತಂಡಕ್ಕೂ ಹಾಗೂ ಅವರ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ.

- Advertisement -spot_img

More articles

- Advertisement -spot_img

Latest article