No menu items!
20.5 C
Munich
Sunday, June 21, 2026

ಕೋಲ್ಕತ್ತಾದ ರೆಡ್ ರೋಡ್ ನಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ; 35 ಸಾವಿರಕ್ಕೂ ಹೆಚ್ಚು ಜನ ಭಾಗಿ

Must read

ಕೋಲ್ಕತ್ತಾದ ರೆಡ್ ರೋಡ್ ನಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ; 35 ಸಾವಿರಕ್ಕೂ ಹೆಚ್ಚು ಜನ ಭಾಗಿ

ಕೋಲ್ಕತ್ತಾ/ನವದೆಹಲಿ: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್ನಲ್ಲಿ ಭವ್ಯ ಸಾಮೂಹಿಕ ಯೋಗಾಭ್ಯಾಸಕ್ಕೆ ನೇತೃತ್ವ ವಹಿಸಲಿದ್ದಾರೆ. ಪ್ರಧಾನಿ ಅವರೊಂದಿಗೆ ಸುಮಾರು 35 ಸಾವಿರಕ್ಕೂ ಹೆಚ್ಚು ಜನರು ನೇರವಾಗಿ ಯೋಗಾಸನಗಳಲ್ಲಿ ಭಾಗವಹಿಸಲಿದ್ದು, ನಗರಾದ್ಯಂತ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಆಗಿದ್ದು, ಅದರ ಅಂಗವಾಗಿ ಪಶ್ಚಿಮ ಬಂಗಾಳದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯ ಸರ್ಕಾರವು ತನ್ನ ಎಲ್ಲಾ ಸರ್ಕಾರಿ ನೌಕರರು ಯೋಗ ದಿನಾಚರಣೆಯಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಿದೆ.
ಹೂಗ್ಲಿ ನದಿಯ ಬಾಬು ಘಾಟ್ ಪ್ರದೇಶದಲ್ಲಿ ವಿಶಿಷ್ಟ ಜಲ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಂದರಬನ್ಸ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿರುವ 500ಕ್ಕೂ ಹೆಚ್ಚು ದೋಣಿಗಳ ಮೇಲೆ ಯೋಗಪಟುಗಳು ಏಕಕಾಲದಲ್ಲಿ ಯೋಗಾಸನ ಪ್ರದರ್ಶಿಸಲಿದ್ದಾರೆ. ಈ ಅಪರೂಪದ ಕಾರ್ಯಕ್ರಮವನ್ನು ಗಿನ್ನಿಸ್ ವಿಶ್ವ ದಾಖಲೆಗೆ ಸೇರಿಸುವ ಉದ್ದೇಶವೂ ಇದೆ.
ರೆಡ್ ರೋಡ್ ಮಾತ್ರವಲ್ಲದೆ, ಕೋಲ್ಕತ್ತಾದ ಹಲವು ಐತಿಹಾಸಿಕ ಮತ್ತು ಪ್ರಮುಖ ತಾಣಗಳಲ್ಲೂ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಕ್ಟೋರಿಯಾ ಮೆಮೋರಿಯಲ್, ಹೌರಾ ಸೇತುವೆ, ಈಡನ್ ಗಾರ್ಡನ್ಸ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಸಾವಿರಾರು ಜನರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತೀಯ ರಾಯಭಾರ ಕಚೇರಿಗಳ ಸಹಯೋಗದೊಂದಿಗೆ ವಿಶ್ವದ 210ಕ್ಕೂ ಹೆಚ್ಚು ದೇಶಗಳ ಸುಮಾರು 2,500 ಪ್ರಮುಖ ಸ್ಥಳಗಳಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ. ಭಾರತದಲ್ಲಿಯೂ ಹಂಪಿ, ಮಹಾಬಲಿಪುರಂ, ಕೆಂಪುಕೋಟೆ, ನಳಂದಾ ಸೇರಿದಂತೆ 100ಕ್ಕೂ ಹೆಚ್ಚು ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಭಾರತೀಯ ಪುರಾತತ್ವ ಇಲಾಖೆ ವಿಶೇಷ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಯೋಗದ ಮೂಲಕ ಆರೋಗ್ಯಕರ ಜೀವನಶೈಲಿ ಮತ್ತು ಮಾನಸಿಕ ನೆಮ್ಮದಿಯ ಸಂದೇಶವನ್ನು ಜಗತ್ತಿನಾದ್ಯಂತ ಹರಡುವ ಉದ್ದೇಶದಿಂದ ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನವನ್ನು ಭವ್ಯವಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ನೇತೃತ್ವದ ಕಾರ್ಯಕ್ರಮ ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಲಿದೆ.

- Advertisement -spot_img

More articles

- Advertisement -spot_img

Latest article