No menu items!
33 C
Munich
Friday, June 19, 2026

ಕ್ರಾಸ್ ವೋಟ್ ಮಾಡಿದವರ ಮಾಹಿತಿ ನನ್ನ ಬಳಿ ಇದೆ; ಯಾರನ್ನೂ ಅತಿಯಾಗಿ ನಂಬಬಾರದು ಎಂಬ ಪಾಠ ಕಲಿತೆ – ಕುಮಾರಸ್ವಾಮಿ

Must read

ಕ್ರಾಸ್ ವೋಟ್ ಮಾಡಿದವರ ಮಾಹಿತಿ ನನ್ನ ಬಳಿ ಇದೆ; ಯಾರನ್ನೂ ಅತಿಯಾಗಿ ನಂಬಬಾರದು ಎಂಬ ಪಾಠ ಕಲಿತೆ – ಕುಮಾರಸ್ವಾಮಿ

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಕ್ರಾಸ್ ವೋಟ್ ಮಾಡಿದವರ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಈ ಫಲಿತಾಂಶದ ಬಗ್ಗೆ ತಮಗೆ ಮೊದಲೇ ಅಂದಾಜು ಇದ್ದ ಕಾರಣ ಯಾವುದೇ ರೀತಿಯ ನಿರಾಸೆ ಅಥವಾ ವಿಚಲಿತತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಕ್ರಾಸ್ ವೋಟ್ ಮಾಡಿದ ನಾಲ್ವರು ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಪಕ್ಷ ತೊರೆಯುವ ವಿಚಾರವಾಗಿ ಚರ್ಚೆ ನಡೆಸಿರುವುದು ನನಗೆ ಗೊತ್ತಿದೆ. ಯಾರು ಏನು ಮಾಡಿದ್ದಾರೆ ಎಂಬ ಮಾಹಿತಿ ನನ್ನ ಬಳಿ ಇದೆ” ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಉದ್ದೇಶದ ಬಗ್ಗೆ ಮಾತನಾಡಿದ ಅವರು, “ಈ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿಂದ ನಾವು ಅಭ್ಯರ್ಥಿಯನ್ನು ನಿಲ್ಲಿಸಿರಲಿಲ್ಲ. ನಮ್ಮ 18 ಶಾಸಕರಲ್ಲಿ ಜಿ.ಟಿ. ದೇವೇಗೌಡರನ್ನು ಹೊರತುಪಡಿಸಿ ಉಳಿದ 17 ಮತಗಳು ಒಗ್ಗಟ್ಟಾಗಿ ಉಳಿಯುತ್ತವೆಯೇ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶವಿತ್ತು. ನಮ್ಮ ಮತಗಳು ಒಡೆಯಬಾರದು ಎಂಬ ಕಾರಣಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿತ್ತು” ಎಂದು ತಿಳಿಸಿದರು.
“ಈ ಫಲಿತಾಂಶ ನನಗೆ ಮತ್ತೊಂದು ಅನುಭವವನ್ನು ನೀಡಿದೆ. ರಾಜಕೀಯದಲ್ಲಿ ಯಾರನ್ನೂ ಅತಿಯಾಗಿ ನಂಬಬಾರದು ಎಂಬ ಪಾಠ ಕಲಿತಿದ್ದೇನೆ. ಮುಂದಿನ ದಿನಗಳಲ್ಲಿ ಈ ಗುಣವನ್ನು ಸರಿಪಡಿಸಿಕೊಳ್ಳಲು ಈ ಬೆಳವಣಿಗೆ ಸಹಕಾರಿಯಾಗಿದೆ” ಎಂದು ಹೇಳಿದರು.
ಚುನಾವಣಾ ಫಲಿತಾಂಶದಿಂದ ಪಕ್ಷದ ಮೇಲೆ ಯಾವುದೇ ದೊಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಹೇಳಿದ ಕುಮಾರಸ್ವಾಮಿ, “ನಮ್ಮ ನಿಜವಾದ ರಾಜಕೀಯ ಅಖಾಡ 2028ರ ವಿಧಾನಸಭೆ ಚುನಾವಣೆ. ಆ ಚುನಾವಣೆಗೆ ಈಗಿನಿಂದಲೇ ವೇದಿಕೆ ಸಿದ್ಧಪಡಿಸುತ್ತಿದ್ದೇವೆ. ಸದ್ಯ ಆರ್ಥಿಕ ಶಕ್ತಿ ಕಡಿಮೆ ಇರಬಹುದು, ಆದರೆ ಪಕ್ಷವನ್ನು ಉಳಿಸಿಕೊಳ್ಳುವ ಮತ್ತು ಬಲಪಡಿಸುವ ಶಕ್ತಿ ನಮ್ಮಲ್ಲಿದೆ” ಎಂದರು.
ಪಕ್ಷ ತೊರೆಯುವವರ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಯಾರು ಪಕ್ಷ ಬಿಟ್ಟು ಹೋಗಲು ಬಯಸುತ್ತಾರೋ ಅವರು ಹೋಗಲಿ. ಮುಂದಿನ ದಿನಗಳಲ್ಲಿ ಹೊಸ ತಲೆಮಾರಿನ ಜೆನ್-ಜಿ ಯುವಕರನ್ನು ಮುಂದಿಟ್ಟುಕೊಂಡು ಪಕ್ಷವನ್ನು ಕಟ್ಟುತ್ತೇನೆ. 2028ರ ಚುನಾವಣೆಯಲ್ಲಿ ಯುವ ನಾಯಕರಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶವಿದೆ” ಎಂದು ಹೇಳಿದರು.

- Advertisement -spot_img

More articles

- Advertisement -spot_img

Latest article