ಮೀಸಲಾತಿ ಸಿಗದಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ: ರಮೇಶ್ ಜಾರಕಿಹೊಳಿ ಘೋಷಣೆ
ಬಳ್ಳಾರಿ: 2028ರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ಸರ್ಕಾರದಲ್ಲಿ ತಾನು ಸಚಿವನಾಗುವ ವಿಶ್ವಾಸವಿದ್ದು, ತಮ್ಮ ಸಮಾಜಕ್ಕೆ 7.5 ಶೇಕಡಾ ಮೀಸಲಾತಿ ದೊರೆಯದಿದ್ದರೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಘೋಷಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಆಯೋಜಿಸಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ರಾಜಕೀಯದಲ್ಲಿ ತಮ್ಮ ಸಮಾಜದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
“ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಯಾರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ನಿರ್ಧಾರ ಮಾಡುವ ಶಕ್ತಿ ನಮ್ಮ ಸಮಾಜಕ್ಕಿದೆ. 1970ರ ದಶಕದಲ್ಲೇ ನಾವು ಕೆಲವೇ ಸ್ಥಾನಗಳನ್ನು ಗೆದ್ದಿದ್ದರೂ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದೇವೆ. ಈಗ ಮತ್ತಷ್ಟು ಸಂಘಟಿತರಾಗಿ ಬಲಿಷ್ಠರಾಗಬೇಕಿದೆ,” ಎಂದು ಹೇಳಿದರು.
ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೇ, ರಾಜ್ಯದ ಇತರ ಸಣ್ಣ ಸಮುದಾಯಗಳನ್ನೂ ಒಗ್ಗೂಡಿಸಿಕೊಂಡಾಗ ಮಾತ್ರ ನಿಜವಾದ ರಾಜಕೀಯ ಶಕ್ತಿ ನಿರ್ಮಾಣವಾಗಲಿದೆ ಎಂದು ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ತಮ್ಮ ಸಹೋದರ ಹಾಗೂ ಹಾಲಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಟೀಕಿಸಿದ ರಮೇಶ್ ಜಾರಕಿಹೊಳಿ, “ಸಮಾಜದ ಹಿತಾಸಕ್ತಿಗಾಗಿ ಮಾತನಾಡುವ ಧೈರ್ಯ ಕೆಲವರಿಗೆ ಇಲ್ಲ. ನಾನು ಅವರ ಸ್ಥಾನದಲ್ಲಿದ್ದರೆ ಇಷ್ಟೊತ್ತಿಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುತ್ತಿದ್ದೆ. ಆದರೆ ಅಧಿಕಾರ ತ್ಯಾಗ ಮಾಡುವ ಶಕ್ತಿ ಮತ್ತು ಧೈರ್ಯ ಎಲ್ಲರಲ್ಲೂ ಇರುವುದಿಲ್ಲ,” ಎಂದು ಕಿಡಿಕಾರಿದರು.



