ದೀಪಾವಳಿ ಹಬ್ಬದ ನಡುವೆ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ! ತರಕಾರಿ, ಹಣ್ಣುಗಳ ದರ ಗಗನಕ್ಕೆ, ಗ್ರಾಹಕರ ಜೇಬಿಗೆ ಕತ್ತರಿ
ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರನ್ನು ಕಂಗೆಡಿಸುತ್ತಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ತರಕಾರಿ ಹಾಗೂ ಹಣ್ಣುಗಳ ಬೆಲೆಯೂ ಗಗನಕ್ಕೇರಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಮತ್ತಷ್ಟು ಆರ್ಥಿಕ ಹೊರೆ ಎದುರಾಗಿದೆ. ದಿನನಿತ್ಯದ ಅಡುಗೆಗೆ ಅಗತ್ಯವಿರುವ ತರಕಾರಿಗಳ ಬೆಲೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರು ಖರೀದಿಗೆ ಹಿಂದೇಟು ಹಾಕುವಂತಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಹಾಗೂ ಬೆಳೆ ಹಾನಿಯಿಂದಾಗಿ ತರಕಾರಿ ಮತ್ತು ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಅದರಲ್ಲೂ ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಆಲೂಗಡ್ಡೆ ಸೇರಿದಂತೆ ದಿನನಿತ್ಯ ಬಳಸುವ ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಸಾಮಾನ್ಯ ಜನರ ತಿಂಗಳ ಬಜೆಟ್ ಮೇಲೆ ಪರಿಣಾಮ ಬೀರಿದೆ.
ಹಾಪ್ಕಾಮ್ಸ್ ದರಪಟ್ಟಿಯ ಪ್ರಕಾರ, ದಪ್ಪ ಈರುಳ್ಳಿ ಕೆಜಿಗೆ 77 ರೂಪಾಯಿ ತಲುಪಿದ್ದರೆ, ಸಾಂಬಾರ್ ಈರುಳ್ಳಿ 140 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ ಕೆಜಿಗೆ 310 ರೂಪಾಯಿ, ನುಗ್ಗೆಕಾಯಿ 140 ರೂಪಾಯಿ, ಡಬಲ್ ಬೀನ್ಸ್ 110 ರೂಪಾಯಿ, ಹುರುಳಿಕಾಯಿ 90 ರೂಪಾಯಿ ಹಾಗೂ ಆಲೂಗಡ್ಡೆ 65 ರೂಪಾಯಿಗೆ ಮಾರಾಟವಾಗುತ್ತಿದೆ. ಕ್ಯಾರೆಟ್ ಕೆಜಿಗೆ 50 ರೂಪಾಯಿ, ಮಂಗಳೂರು ಸೌತೆಕಾಯಿ 65 ರೂಪಾಯಿ, ಹಸಿಮೆಣಸಿನಕಾಯಿ 90 ರೂಪಾಯಿ, ಅಲಸಂದೆ 80 ರೂಪಾಯಿ ಹಾಗೂ ತೊಗರಿಕಾಯಿ 90 ರೂಪಾಯಿಗೆ ಮಾರಾಟವಾಗುತ್ತಿದೆ.
ತರಕಾರಿಗಳ ಜೊತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ಹಬ್ಬದ ಖರೀದಿಗೆ ಮುಂದಾಗಿರುವ ಗ್ರಾಹಕರಿಗೆ ಮತ್ತಷ್ಟು ಹೊರೆ ಎದುರಾಗಿದೆ. ವಾಷಿಂಗ್ಟನ್ ಸೇಬು ಕೆಜಿಗೆ 355 ರೂಪಾಯಿ, ದಾಳಿಂಬೆ 285 ರೂಪಾಯಿ, ಏಲಕ್ಕಿ ಬಾಳೆಹಣ್ಣು 120 ರೂಪಾಯಿ, ಪಪ್ಪಾಯಿ 64 ರೂಪಾಯಿ ಹಾಗೂ ನಾಟಿ ಸೀಬೆಹಣ್ಣು 100 ರೂಪಾಯಿಗೆ ಮಾರಾಟವಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ದುಬಾರಿ ಬೆಲೆ ನೀಡಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ತರಕಾರಿ ಹಾಗೂ ಹಣ್ಣುಗಳ ಜೊತೆಗೆ ಸೊಪ್ಪಿನ ಬೆಲೆಯಲ್ಲಿಯೂ ಭಾರಿ ಏರಿಕೆ ಕಂಡುಬಂದಿದೆ. ಕೆಲವು ಸೊಪ್ಪುಗಳ ದರ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಕೊತ್ತಂಬರಿ ಸೊಪ್ಪು ಕೆಜಿಗೆ 180 ರೂಪಾಯಿ, ಸಬ್ಬಸಿಗೆ ಸೊಪ್ಪು 160 ರೂಪಾಯಿ, ಪುದೀನಾ 102 ರೂಪಾಯಿ, ಪಾಲಕ್ ಸೊಪ್ಪು 90 ರೂಪಾಯಿ, ದಂಟಿನ ಸೊಪ್ಪು 80 ರೂಪಾಯಿ, ಮೆಂತೆ ಸೊಪ್ಪು 160 ರೂಪಾಯಿ ಹಾಗೂ ಕರಿಬೇವು 80 ರೂಪಾಯಿಗೆ ಮಾರಾಟವಾಗುತ್ತಿದೆ. ಸೊಪ್ಪಿನ ಬೆಲೆಯಲ್ಲಿನ ಈ ಏರಿಕೆ ಗ್ರಾಹಕರಿಗೆ ಮತ್ತೊಂದು ಆಘಾತ ನೀಡಿದೆ.
ಬೆಲೆ ಏರಿಕೆಯ ಪರಿಣಾಮ ಗ್ರಾಹಕರು ತರಕಾರಿ ಖರೀದಿಸುವ ಪ್ರಮಾಣವನ್ನೂ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಒಂದು ಅಥವಾ ಎರಡು ಕೆಜಿ ತರಕಾರಿ ಖರೀದಿಸುತ್ತಿದ್ದವರು ಇದೀಗ ಅರ್ಧ ಕೆಜಿ ಖರೀದಿಗೆ ಸೀಮಿತವಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳು ದಿನನಿತ್ಯದ ಖರ್ಚು ನಿಭಾಯಿಸಲು ಪರದಾಡುವಂತಾಗಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಬ್ಬದ ಬಳಿಕ ವಾಡಿಕೆಯಂತೆ ಮಳೆಯಾಗಿ, ಕೃಷಿ ಉತ್ಪನ್ನಗಳ ಪೂರೈಕೆ ಸುಧಾರಿಸಿದರೆ ತರಕಾರಿ ಹಾಗೂ ಹಣ್ಣುಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಹಬ್ಬದ ಸಂಭ್ರಮದ ನಡುವೆಯೂ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.



