No menu items!
31.2 C
Munich
Friday, June 26, 2026

ರಾಮ ಮಂದಿರ ದೇಣಿಗೆ ಹಗರಣದ ಇನ್ಸೈಡ್ ಸ್ಟೋರಿ: ಸಿಸಿಟಿವಿಗೆ ಮಂಕುಬೂದಿ ಎರಚಿ ಕೋಟ್ಯಂತರ ಕಾಣಿಕೆ ಹಣ ಎಗರಿಸಿದ ಸಿಬ್ಬಂದಿ

Must read

ರಾಮ ಮಂದಿರ ದೇಣಿಗೆ ಹಗರಣದ ಇನ್ಸೈಡ್ ಸ್ಟೋರಿ: ಸಿಸಿಟಿವಿಗೆ ಮಂಕುಬೂದಿ ಎರಚಿ ಕೋಟ್ಯಂತರ ಕಾಣಿಕೆ ಹಣ ಎಗರಿಸಿದ ಸಿಬ್ಬಂದಿ

ಲಕ್ನೋ: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಮತ್ತು ದೇಣಿಗೆ ಹಣ ದುರ್ಬಳಕೆ ಪ್ರಕರಣದ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬಿದ್ದಿವೆ. ಭಕ್ತರು ಭಕ್ತಿಭಾವದಿಂದ ಅರ್ಪಿಸುತ್ತಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ದೇವಸ್ಥಾನದ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಕೆಲ ಸಿಬ್ಬಂದಿಯೇ ವ್ಯವಸ್ಥಿತವಾಗಿ ಕಳವು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತನಿಖೆಯ ಪ್ರಕಾರ, ಮೇ ತಿಂಗಳ ಕೊನೆಯ ವಾರದಿಂದ ಕಾಣಿಕೆ ಹುಂಡಿಗಳಲ್ಲಿ ಸಂಗ್ರಹವಾಗುತ್ತಿದ್ದ ₹500 ಮುಖಬೆಲೆಯ ನೋಟುಗಳ ಕಂತೆಗಳು ನಿರಂತರವಾಗಿ ನಾಪತ್ತೆಯಾಗುತ್ತಿದ್ದು, ಇದು ರಾಮ ಮಂದಿರ ಟ್ರಸ್ಟ್ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿತ್ತು. ಸಾಮಾನ್ಯವಾಗಿ ಒಂದು ಕಾಣಿಕೆ ಹುಂಡಿಯಲ್ಲಿ ₹6 ರಿಂದ ₹7 ಲಕ್ಷದವರೆಗೆ ಹಣ ಸಂಗ್ರಹವಾಗುತ್ತಿದ್ದರೂ, ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು.
ಆರಂಭದಲ್ಲಿ ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಪತ್ತೆಯಾಗಿರಲಿಲ್ಲ. ಆದರೆ ಹಣ ಎಣಿಕೆ ನಡೆಯುವ ಕೊಠಡಿಯಲ್ಲಿ ಗುಪ್ತವಾಗಿ ಹೆಚ್ಚುವರಿ ಕ್ಯಾಮೆರಾಗಳನ್ನು ಅಳವಡಿಸಿದ ಬಳಿಕ ಕಳ್ಳತನದ ಸಂಪೂರ್ಣ ಚಿತ್ರಣ ಬಯಲಾಗಿದೆ.
ತನಿಖೆಯಲ್ಲಿ ಸಿಕ್ಕಿರುವ ದೃಶ್ಯಾವಳಿಗಳ ಪ್ರಕಾರ, ಹಣ ಎಣಿಕೆ ವೇಳೆ ತಂಡದಲ್ಲಿದ್ದ ಒಬ್ಬ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸಿಸಿಟಿವಿ ಕ್ಯಾಮೆರಾದ ದೃಶ್ಯಕ್ಕೆ ಅಡ್ಡವಾಗಿ ನಿಲ್ಲುತ್ತಿದ್ದ. ಆತನ ನೆರಳಿನಲ್ಲಿ ಉಳಿದ ಸಿಬ್ಬಂದಿ ನೋಟುಗಳ ಕಂತೆಗಳಿಂದ ಹಣ ತೆಗೆದು ತಮ್ಮ ಬಟ್ಟೆಯೊಳಗೆ ಬಚ್ಚಿಡುತ್ತಿದ್ದರು. ಹೀಗೆ ಕ್ಯಾಮೆರಾಗಳ ಕಣ್ತಪ್ಪಿಸಿ ನಿರಂತರವಾಗಿ ಕಾಣಿಕೆ ಹಣವನ್ನು ಕಳವು ಮಾಡಲಾಗುತ್ತಿತ್ತು.
ಇದಷ್ಟೇ ಅಲ್ಲದೆ, ಆರೋಪಿಗಳು ಬ್ಯಾಂಕ್ ವ್ಯವಸ್ಥೆಯನ್ನೂ ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹಣ ಎಣಿಕೆ ವೇಳೆ ನೋಟಿನ ಕಂತೆಗಳಲ್ಲಿ ಹೆಚ್ಚುವರಿ ನೋಟುಗಳನ್ನು ಸೇರಿಸಿ, ಅಧಿಕೃತ ದಾಖಲೆಗಳಲ್ಲಿ ಮಾತ್ರ ಕಡಿಮೆ ಮೊತ್ತವನ್ನು ದಾಖಲಿಸುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ಕಂತೆಗಳ ಸಂಖ್ಯೆಯನ್ನು ಮಾತ್ರ ಪರಿಶೀಲಿಸುತ್ತಿದ್ದ ಕಾರಣ, ಒಳಗಿದ್ದ ಹೆಚ್ಚುವರಿ ನೋಟುಗಳ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರಲಿಲ್ಲ. ಬಳಿಕ ಬ್ಯಾಂಕ್ಗೆ ಹಣ ಸಾಗಿಸುವ ವೇಳೆ ಆ ಹೆಚ್ಚುವರಿ ನೋಟುಗಳನ್ನು ಆರೋಪಿಗಳು ತಮ್ಮ ವಶಕ್ಕೆ ಪಡೆಯುತ್ತಿದ್ದರು ಎನ್ನಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಹಣ ಎಣಿಕೆ ಕಾರ್ಯಕ್ಕೆ ಸಿಬ್ಬಂದಿಯನ್ನು ವೈಯಕ್ತಿಕ ಶಿಫಾರಸುಗಳ ಆಧಾರದ ಮೇಲೆ ನೇಮಕ ಮಾಡಿರುವುದು ಈ ಹಗರಣಕ್ಕೆ ಪ್ರಮುಖ ಕಾರಣವಾಗಿದೆ. ನೇಮಕಗೊಂಡ ಸಿಬ್ಬಂದಿಯ ಮೇಲೆ ಸಮರ್ಪಕ ಮೇಲ್ವಿಚಾರಣೆ ಅಥವಾ ತಪಾಸಣೆ ಇರದ ಕಾರಣ ಆರೋಪಿಗಳಿಗೆ ಕಳ್ಳತನ ನಡೆಸಲು ಸುಲಭವಾಗಿತ್ತು.
ಪ್ರಕರಣದಲ್ಲಿ ಬಂಧಿತರಾಗಿರುವ ಟಿನ್ನು ಯಾದವ್, ದೇವಸ್ಥಾನದ ಆಡಳಿತಾತ್ಮಕ ವ್ಯವಸ್ಥಾಪಕರಾಗಿ ಹಾಗೂ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆತ ತನ್ನ ಸಂಬಂಧಿ ಮನೀಷ್ ಯಾದವ್ರನ್ನು ಹಣ ಎಣಿಕೆ ತಂಡಕ್ಕೆ ಶಿಫಾರಸು ಮಾಡಿದ್ದ. ಮತ್ತೊಬ್ಬ ಆರೋಪಿ ಅನುಕಲ್ಪ್ ಮಿಶ್ರಾ ತನ್ನ ಸಂಬಂಧಿ ಲವ ಕುಶ್ ಮಿಶ್ರಾನನ್ನೂ ಇದೇ ಕಾರ್ಯಕ್ಕೆ ಸೇರಿಸಿದ್ದ ಎಂದು ತನಿಖೆ ತಿಳಿಸಿದೆ.
ತನಿಖೆಯಲ್ಲಿ ಕೇವಲ ನಗದು ಹಣವಷ್ಟೇ ಅಲ್ಲದೆ, ಭಕ್ತರು ಶ್ರೀರಾಮಲಲ್ಲಾಗೆ ಸಮರ್ಪಿಸಿದ್ದ ಚಿನ್ನಾಭರಣಗಳನ್ನೂ ಕಳವು ಮಾಡಲಾಗಿರುವುದು ಬಹಿರಂಗವಾಗಿದೆ. ಕಿವಿಯೋಲೆ, ಮೂಗುತಿ, ಬಳೆ, ಕಾಲುಂಗುರ ಸೇರಿದಂತೆ ಹಲವು ಬೆಲೆಬಾಳುವ ಆಭರಣಗಳನ್ನು ಅಧಿಕೃತವಾಗಿ ದಾಖಲೆ ಮಾಡುವ ಮುನ್ನವೇ ಕಾಣಿಕೆ ಪೆಟ್ಟಿಗೆಯಿಂದ ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿ ಅವಿನಾಶ್ ಪಾಂಡೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಹಾಗೂ ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದ ದಿನವೇ ಆತನ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವುದು ಪತ್ತೆಯಾಗಿದೆ. ಈ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಪೊಲೀಸರು, ಲವ ಕುಶ್ ಮಿಶ್ರಾ ನಿವಾಸದ ಮೇಲೆ ದಾಳಿ ನಡೆಸಿ ₹10 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಹಗರಣದಲ್ಲಿ ಇನ್ನೂ ಹಲವರ ಪಾತ್ರವಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article