ಕೆ.ಆರ್‌.ಪುರ ತ್ರಿಬಲ್‌ ಮರ್ಡರ್‌ ಕೇಸ್‌: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕೆನೆತ್‌ ಅರೆಸ್ಟ್‌

0
71

ಕೆ.ಆರ್‌.ಪುರ ತ್ರಿಬಲ್‌ ಮರ್ಡರ್‌ ಕೇಸ್‌: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕೆನೆತ್‌ ಅರೆಸ್ಟ್‌

ಬೆಂಗಳೂರು: ಕೆ.ಆರ್.ಪುರದಲ್ಲಿ ನಡೆದಿದ್ದ ತ್ರಿಬಲ್ ಮರ್ಡರ್ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕೆನೆತ್‌ನನ್ನು ಕೆ.ಆರ್.ಪುರ ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತಂದು ಬಂಧನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಈಗಾಗಲೇ ಮತ್ತೊಬ್ಬ ಆರೋಪಿ ಶ್ವೇತಾ ಪೊಲೀಸರ ವಶದಲ್ಲಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಈ ನಡುವೆ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸಿದ್ದರು.

ತನಿಖೆ ವೇಳೆ ಶ್ವೇತಾ ಮತ್ತು ಕೆನೆತ್ ಇಬ್ಬರೂ ಬೆಂಗಳೂರಿನಿಂದ ಬೈಕ್‌ನಲ್ಲಿ ಪುದುಚೇರಿಗೆ ತೆರಳಿರುವುದು ಬೆಳಕಿಗೆ ಬಂದಿದೆ. ಕೆನೆತ್ ಶ್ವೇತಾಳನ್ನು ಪುದುಚೇರಿವರೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.

ಪುದುಚೇರಿಗೆ ತಲುಪಿದ ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೊಲೆ ಪ್ರಕರಣದ ವಿಚಾರದಲ್ಲಿಯೇ ಮಾತಿನ ಚಕಮಕಿ ನಡೆದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಗಲಾಟೆಯ ಬಳಿಕ ಇಬ್ಬರೂ ಪ್ರತ್ಯೇಕವಾಗಿದ್ದು, ಕೆನೆತ್ ಶ್ವೇತಾಳನ್ನು ಪುದುಚೇರಿಯಲ್ಲೇ ಬಿಟ್ಟು ತೆರಳಿದ್ದಾನೆ ಎನ್ನಲಾಗಿದೆ. ಬಳಿಕ ಶ್ವೇತಾ ಪುದುಚೇರಿ ರೈಲು ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಅಲ್ಲಿಂದ ಬೇರೆಡೆಗೆ ಪರಾರಿಯಾಗುವ ಯೋಜನೆ ಹೊಂದಿದ್ದಳೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆನೆತ್ ಪತ್ತೆಗಾಗಿ ಕೆ.ಆರ್.ಪುರ ಪೊಲೀಸರು ತಿರುಚಿ, ವೇಲಾಂಕಣಿ, ಚೆನ್ನೈ ಹಾಗೂ ಕೊಯಂಬತ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ತನಿಖೆ ವೇಳೆ ಆತ ಹಲವು ಸ್ಥಳಗಳಲ್ಲಿ ಸಂಚರಿಸಿ ಕೊನೆಗೆ ಪುದುಚೇರಿಗೆ ತಲುಪಿರುವುದು ಗೊತ್ತಾಗಿದೆ. ಆತನ ಚಲನವಲನಗಳ ಮಾಹಿತಿ ಆಧರಿಸಿ ಎರಡು ವಿಶೇಷ ಪೊಲೀಸ್ ತಂಡಗಳು ನಿರಂತರವಾಗಿ ಬೆನ್ನುಹತ್ತಿದ್ದು, ಅಂತಿಮವಾಗಿ ಕಳೆದ ರಾತ್ರಿ ಪುದುಚೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿವೆ.

ಪ್ರಸ್ತುತ ಆರೋಪಿ ಕೆನೆತ್‌ನನ್ನು ಕೆ.ಆರ್.ಪುರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಬಂಧನದ ವಿಧಿವಿಧಾನಗಳು ನಡೆಯುತ್ತಿವೆ. ನಂತರ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.