No menu items!
32.3 C
Munich
Sunday, June 28, 2026

ಸಬ್ಸಿಡಿ ಸಾಲ ಕೊಡಿಸುವ ನೆಪದಲ್ಲಿ ಮಹಿಳೆಗೆ ವಂಚನೆ; ಬ್ಯಾಂಕ್ ಖಾತೆ ದುರುಪಯೋಗ ಮಾಡಿ ಲಕ್ಷಾಂತರ ರೂ. ಅಕ್ರಮ ವರ್ಗಾವಣೆ

Must read

ಸಬ್ಸಿಡಿ ಸಾಲ ಕೊಡಿಸುವ ನೆಪದಲ್ಲಿ ಮಹಿಳೆಗೆ ವಂಚನೆ; ಬ್ಯಾಂಕ್ ಖಾತೆ ದುರುಪಯೋಗ ಮಾಡಿ ಲಕ್ಷಾಂತರ ರೂ. ಅಕ್ರಮ ವರ್ಗಾವಣೆ

ಮೈಸೂರು: ಸರ್ಕಾರದ ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ ಅಮಾಯಕ ಮಹಿಳೆಯರ ದಾಖಲೆಗಳನ್ನು ಪಡೆದು, ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಆನ್ಲೈನ್ ವಂಚನೆ ನಡೆಸುತ್ತಿದ್ದ ಜಾಲವೊಂದು ಮೈಸೂರಿನಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ರಾಜೀವನಗರದ ಸೈಯಿದಾ ತರನ್ನಮ್ ಎಂಬ ಮಹಿಳೆಯ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡು ಸುಮಾರು 15 ಲಕ್ಷ ರೂಪಾಯಿ ಹಣ ವರ್ಗಾವಣೆ ನಡೆಸಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಎರಡು ವರ್ಷಗಳ ಹಿಂದೆ ಎನ್.ಆರ್. ಮೊಹಲ್ಲಾದ ಕರ್ನಾಟಕ ಬ್ಯಾಂಕ್ಗೆ ತೆರಳಿದ್ದ ವೇಳೆ ಶೋಯೆಬ್ ಎಂಬಾತ ಸೈಯಿದಾ ಅವರಿಗೆ ಪರಿಚಯವಾಗಿದ್ದ. ನಿಮ್ಮ ಮಗಳ ಮದುವೆಗೆ ಸರ್ಕಾರದಿಂದ ಸಬ್ಸಿಡಿ ಸಾಲ ಕೊಡಿಸುತ್ತೇನೆ ಎಂದು ನಂಬಿಸಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು, ಪ್ರಕ್ರಿಯೆ ಶುಲ್ಕವೆಂದು 7,500 ರೂಪಾಯಿ ಕೂಡ ಪಡೆದಿದ್ದ ಎನ್ನಲಾಗಿದೆ.
ನಂತರ ಸಾಲದ ಕುರಿತು ವಿಚಾರಿಸಿದಾಗ, ಇನ್ನೂ ಮಂಜೂರಾಗಿಲ್ಲ ಎಂದು ಹೇಳುತ್ತಾ ಕಾಲಹರಣ ಮಾಡಿದ್ದಾನೆ. ಇದರಿಂದ ಸೈಯಿದಾ ಅವರು ಹೆಚ್ಚಿನ ಅನುಮಾನ ವ್ಯಕ್ತಪಡಿಸಿರಲಿಲ್ಲ.
ಆದರೆ, ಎರಡು ವರ್ಷಗಳ ಬಳಿಕ ಸಿಇಎನ್ ಪೊಲೀಸ್ ಠಾಣೆಯಿಂದ ಕರೆ ಬಂದಾಗಲೇ ಬ್ಯಾಂಕ್ ಖಾತೆ ದುರ್ಬಳಕೆಯಾದ ಸಂಗತಿ ಬೆಳಕಿಗೆ ಬಂದಿದೆ. ಅವರ ಖಾತೆಯ ಮೂಲಕ ಸುಮಾರು 15 ಲಕ್ಷ ರೂಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಶೋಯೆಬ್ ಸಾಲದ ಹೆಸರಿನಲ್ಲಿ ತಮ್ಮ ದಾಖಲೆಗಳನ್ನು ಪಡೆದು ಬ್ಯಾಂಕ್ ಖಾತೆ ತೆರೆದಿದ್ದ ವಿಚಾರವನ್ನು ಸೈಯಿದಾ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಪೊಲೀಸರು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಹೆಸರಿನಲ್ಲಿ ದಾಖಲೆಗಳು ಅಥವಾ ಹಣ ಕೇಳುವ ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದಿರಬೇಕು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article