ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ್ದೇ ಮುಳುವಾಯ್ತು; ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಂದ ಆರೋಪಿ

0
148

ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ್ದೇ ಮುಳುವಾಯ್ತು; ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಂದ ಆರೋಪಿ

ಬೆಳಗಾವಿ: ಜಿಲ್ಲೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಡೆದಿದೆ. ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಪಾರ್ಟಿ ಕೇಳಿದ ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹಣಮಂತಪ್ಪ ಯಮನಪ್ಪ ಇಟಗಿ ಕೊಲೆಯಾದ ದುರ್ದೈವಿ. ಈತನ ಸ್ನೇಹಿತ ವಿಶ್ವನಾಥ ಪೂಜೇರಿ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಇಬ್ಬರೂ ಮದ್ಯದ ಅಮಲಿನಲ್ಲಿ ಗ್ರಾಮದ ಕಟ್ಟೆಯೊಂದರಲ್ಲಿ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ, ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಹಣಮಂತಪ್ಪ ತನ್ನ ಸ್ನೇಹಿತ ವಿಶ್ವನಾಥನ ಬಳಿ ಪಾರ್ಟಿ ನೀಡುವಂತೆ ಕೇಳಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ಅದು ಗಲಾಟೆಗೆ ತಿರುಗಿದೆ.
ಗಲಾಟೆಯ ವೇಳೆ ವಿಶ್ವನಾಥನ ಕಣ್ಣಿಗೆ ಹಣಮಂತಪ್ಪನ ಬೆರಳು ತಗುಲಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ಹಣಮಂತಪ್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಹಣಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೋಹರಂ ಹಬ್ಬದ ಸಂಭ್ರಮದಲ್ಲಿದ್ದ ವಣ್ಣೂರ ಗ್ರಾಮದಲ್ಲಿ ಈ ಘಟನೆಯಿಂದ ಶೋಕದ ವಾತಾವರಣ ನಿರ್ಮಾಣವಾಗಿದೆ. ಕೊಲೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವನಾಥ ಪೂಜೇರಿಯನ್ನು ನೇಸರಗಿ ಠಾಣೆ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.