ಬೆಂಗಳೂರು: ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಇಂದಿನಿಂದ (ಜುಲೈ 1) ₹183.50 ಇಳಿಕೆ ಮಾಡಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರ ಏರಿಕೆ ಕಂಡಿದ್ದ ಗ್ಯಾಸ್ ದರದ ನಡುವೆ ಈ ಇಳಿಕೆ ಹೋಟೆಲ್ ಉದ್ಯಮ ಹಾಗೂ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ನೆಮ್ಮದಿ ತಂದಿದೆ.
ಈ ದರ ಇಳಿಕೆಯೊಂದಿಗೆ ಕಳೆದ ಜೂನ್‌ನಲ್ಲಿ ₹3,198 ಇದ್ದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ₹3,021ಕ್ಕೆ ಇಳಿದಿದೆ ಎಂದು ಹೋಟೆಲ್ ಅಸೋಸಿಯೇಷನ್ ತಿಳಿಸಿದೆ.
ಅಮೆರಿಕಾ–ಇರಾನ್ ಸಂಘರ್ಷದ ಬಳಿಕ ಹಾಗೂ ಸ್ಟ್ರೈಟ್ ಆಫ್ ಹಾರ್ಮುಜ್ ಮೂಲಕ ಕಚ್ಚಾ ತೈಲ ಸಾಗಣೆಗೆ ಉಂಟಾದ ಅಡಚಣೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿತ್ತು. ಅದರ ಪರಿಣಾಮ ಭಾರತದಲ್ಲಿಯೂ ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ದರಗಳು ಹಂತ ಹಂತವಾಗಿ ಹೆಚ್ಚಾಗಿದ್ದವು.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಹಲವು ಬಾರಿ ಹೆಚ್ಚಿಸಿದ್ದವು. ಆದರೆ ಇದೀಗ ಮೊದಲ ಬಾರಿಗೆ ₹183.50 ದರ ಇಳಿಕೆ ಮಾಡಿರುವುದು ಗಮನಾರ್ಹವಾಗಿದ್ದು, ಹೋಟೆಲ್ ಉದ್ಯಮ ಸೇರಿದಂತೆ ವಾಣಿಜ್ಯ ಬಳಕೆದಾರರಿಗೆ ಇದರ ಲಾಭವಾಗುವ ನಿರೀಕ್ಷೆಯಿದೆ.



