KPSC ನೇಮಕಾತಿ ಹಗರಣ: ತನಿಖೆಗೆ SIT ರಚಿಸಿದ ರಾಜ್ಯ ಸರ್ಕಾರ; ಎಡಿಜಿಪಿ ಹಿತೇಂದ್ರಗೆ ಹೊಣೆ
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿದೆ. ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಎಡಿಜಿಪಿ ಹಿತೇಂದ್ರ ಅವರನ್ನು ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಐಪಿಎಸ್ ಅಧಿಕಾರಿಗಳಾದ ಸೌಮೇಂದು ಮುಖರ್ಜಿ, ಅನೂಪ್ ಎ. ಶೆಟ್ಟಿ, ಕುಶಾಲ್ ಚೌಕ್ಸಿ ಹಾಗೂ ಕ್ಷಮಾ ಮಿಶ್ರಾ ಅವರು ವಿಶೇಷ ತನಿಖಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಅಧಿಕಾರಿಗಳ ತಂಡವು ಕೆಪಿಎಸ್ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಲಿದೆ.
ವಿಶೇಷ ತನಿಖಾ ತಂಡವು ತನಿಖೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ಎಸ್ಐಟಿ ರಚನೆಯಾಗಿರುವುದರಿಂದ ಪ್ರಕರಣದ ಮುಂದಿನ ತನಿಖೆಯತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.



