No menu items!
25.7 C
Munich
Friday, July 10, 2026

ಕರೂರು ಕಾಲ್ತುಳಿತ ದುರಂತ: 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಪತ್ರ ವಿತರಿಸಿದ ಸಿಎಂ ವಿಜಯ್

Must read

ಕರೂರು ಕಾಲ್ತುಳಿತ ದುರಂತ: 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಪತ್ರ ವಿತರಿಸಿದ ಸಿಎಂ ವಿಜಯ್

ಚೆನ್ನೈ: ಕಳೆದ ವರ್ಷ ಕರೂರಿನಲ್ಲಿ ನಡೆದ ಟಿವಿಕೆ (TVK) ಸಮಾವೇಶದ ಕಾಲ್ತುಳಿತ ದುರಂತದ ಬಳಿಕ ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಘಟನೆಯ ಕುರಿತು ಭಾವುಕರಾಗಿ ಮಾತನಾಡುವುದರ ಜೊತೆಗೆ ಪೊಲೀಸರ ನಡೆ ಮತ್ತು ಡಿಎಂಕೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಪೊಲೀಸರನ್ನು ನಂಬಿದ್ದೆ. ಆದರೆ ಅವರೇ ನನ್ನ ಮೇಲೆಯೇ ಕಾಲ್ತುಳಿತದ ಆರೋಪ ಹೊರಿಸಿದರು. ಸಭೆಯನ್ನು ರದ್ದುಗೊಳಿಸುವ ಅಧಿಕಾರ ಪೊಲೀಸರಿಗಿತ್ತು. ಆದರೆ ಕಾರ್ಯಕ್ರಮ ಮುಂದುವರಿಯಲು ಅವಕಾಶ ನೀಡಿದ ಬಳಿಕ ನನ್ನ ಮೇಲೆಯೇ ಹೊಣೆ ಹೊರಿಸಲಾಯಿತು” ಎಂದು ಹೇಳಿದರು.
ಕಾಲ್ತುಳಿತ ದುರಂತವು ತಮ್ಮ ಜೀವನದ ಅತ್ಯಂತ ನೋವಿನ ಘಟನೆ ಎಂದು ಹೇಳಿದ ವಿಜಯ್, “ಆ ದಿನ ನಡೆದ ಘಟನೆ ಇಂದಿಗೂ ನನ್ನನ್ನು ಕಾಡುತ್ತಿದೆ. ಈ ದುರಂತಕ್ಕೆ ನಿಜವಾದ ಹೊಣೆ ಯಾರು ಎಂಬುದು ಬಹಿರಂಗವಾಗಬೇಕು” ಎಂದು ಆಗ್ರಹಿಸಿದರು.
ದುರಂತದ ಬಳಿಕ ಸಾರ್ವಜನಿಕವಾಗಿ ಮಾತನಾಡದಿರುವುದಕ್ಕೆ ಟೀಕೆ ಮಾಡಿದವರಿಗೂ ಪ್ರತಿಕ್ರಿಯಿಸಿದ ಅವರು, “ನಾನು ಮನೆಯಲ್ಲಿ ದುಃಖದಲ್ಲಿದ್ದಾಗ ಕೆಲವರು ನಾನು ಅಡಗಿಕೊಂಡಿದ್ದೇನೆ ಎಂದು ಆರೋಪಿಸಿದರು. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯ ನಡೆಸಿದರು” ಎಂದು ಕಿಡಿಕಾರಿದರು.
ಈ ವೇಳೆ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 41 ಕುಟುಂಬಗಳ ಪೈಕಿ 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶಗಳನ್ನು ಮುಖ್ಯಮಂತ್ರಿ ವಿಜಯ್ ವಿತರಿಸಿದರು. ಈ ಮೂಲಕ ದುರಂತದ ಬಳಿಕ ನೀಡಿದ್ದ ಭರವಸೆಯನ್ನು ಈಡೇರಿಸಿದರು.
ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಆದರೆ, ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಸರ್ಕಾರದ ನೀತಿ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ ನೇಮಕಾತಿ ಪತ್ರ ವಿತರಣೆಗೆ ಅನುಮತಿ ನೀಡಿದೆ. ಆದರೆ, ಈ ನೇಮಕಾತಿಗಳು ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ ಸಮಾವೇಶದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟಿದ್ದರು. ದುರಂತದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ವಿಜಯ್, ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವುದರ ಜೊತೆಗೆ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶಗಳನ್ನು ವಿತರಿಸಿದರು.

- Advertisement -spot_img

More articles

- Advertisement -spot_img

Latest article