ದೊಡ್ಡಬಳ್ಳಾಪುರದಲ್ಲಿ ಪೆಟ್ರೋಲ್ ಟ್ಯಾಂಕರ್ʼಗೆ ಬೆಂಕಿ: ಮರಕ್ಕೆ ಡಿಕ್ಕಿಯಾಗಿ ಎರಡು ಲಾರಿಗಳು ಸುಟ್ಟು ಕರಕಲು
ದೊಡ್ಡಬಳ್ಳಾಪುರ: ಅತಿ ವೇಗವಾಗಿ ಬಂದ ಪೆಟ್ರೋಲ್ ಟ್ಯಾಂಕರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 11ನೇ ಮೈಲಿ ಬಳಿ ನಡೆದಿದೆ.
ಪ್ರಾಥಮಿಕ ಮಾಹಿತಿಯಂತೆ, ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮರಕ್ಕೆ ಡಿಕ್ಕಿ ಹೊಡೆದ ತಕ್ಷಣ ಪೆಟ್ರೋಲ್ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಅಗ್ನಿ ಜ್ವಾಲೆಗಳು ವ್ಯಾಪಿಸಿವೆ.
ಈ ವೇಳೆ ಪಕ್ಕದಲ್ಲೇ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಹಾಲಿನ ಟ್ಯಾಂಕರ್ಗೂ ಬೆಂಕಿ ವ್ಯಾಪಿಸಿದ್ದು, ಎರಡೂ ಲಾರಿಗಳು ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್, ಎರಡೂ ವಾಹನಗಳ ಚಾಲಕರು ಸಮಯಪ್ರಜ್ಞೆ ಮೆರೆದು ಲಾರಿಯಿಂದ ಹೊರಗೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಂಕಿಯ ತೀವ್ರತೆಗೆ ಎರಡೂ ಲಾರಿಗಳು ಬಹುತೇಕ ಸುಟ್ಟು ಕರಕಲಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.



