ಗ್ರೇಟರ್ ಬೆಂಗಳೂರು ಚುನಾವಣೆಗೆ ಡೆಡ್ ಲೈನ್ ವಿಸ್ತರಣೆ; ಡಿಸೆಂಬರ್ 31ರೊಳಗೆ ಮತದಾನ ನಡೆಸಲು ಸುಪ್ರೀಂ ಕೋರ್ಟ್ ಆದೇಶ
ಬೆಂಗಳೂರು/ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಸಂಬಂಧಿಸಿದ ಹಗ್ಗಜಗ್ಗಾಟದ ನಡುವೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ನಿಂದ ನಿರಾಳತೆ ಸಿಕ್ಕಿದೆ. ಈ ಹಿಂದೆ ಆಗಸ್ಟ್ 31, 2026ರೊಳಗೆ ಚುನಾವಣೆ ನಡೆಸುವಂತೆ ನೀಡಿದ್ದ ಆದೇಶವನ್ನು ಪರಿಷ್ಕರಿಸಿರುವ ಸುಪ್ರೀಂ ಕೋರ್ಟ್, ಇದೀಗ ಡಿಸೆಂಬರ್ 31, 2026ರೊಳಗೆ ಜಿಬಿಎ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಹಿಂದೆ ನಿಗದಿಪಡಿಸಿದ್ದ ಗಡುವಿನೊಳಗೆ ಚುನಾವಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸೇರಿದಂತೆ ಚುನಾವಣಾ ಸಿದ್ಧತೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ಸರ್ಕಾರ ವಾದಿಸಿತ್ತು. ಸರ್ಕಾರದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣೆಗೆ ಹೆಚ್ಚುವರಿ ಕಾಲಾವಕಾಶ ನೀಡಿದೆ.
ಬೆಂಗಳೂರಿನ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರೂಪಕ್ಕೆ ಪರಿವರ್ತಿಸಲಾಗಿದೆ. ಆದರೆ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ಬಂದರೂ ಚುನಾವಣೆ ಮಾತ್ರ ಇನ್ನೂ ನಡೆದಿಲ್ಲ.
ಬಿಬಿಎಂಪಿಯ ಚುನಾಯಿತ ಆಡಳಿತದ ಅವಧಿ 2020ರ ಸೆಪ್ಟೆಂಬರ್ 10ರಂದು ಅಂತ್ಯಗೊಂಡಿತ್ತು. ನಿಯಮಾನುಸಾರ ಅದೇ ವರ್ಷ ಚುನಾವಣೆಯನ್ನು ನಡೆಸಬೇಕಾಗಿದ್ದರೂ, ಕೋವಿಡ್-19 ಮಹಾಮಾರಿ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಬಳಿಕ ವಿವಿಧ ಆಡಳಿತಾತ್ಮಕ ಹಾಗೂ ಕಾನೂನು ಕಾರಣಗಳಿಂದ ಚುನಾವಣೆ ನಿರಂತರವಾಗಿ ಮುಂದೂಡುತ್ತಲೇ ಬಂದಿದೆ.
ಬಿಜೆಪಿ ಆಡಳಿತಾವಧಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದು, ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಜಿಬಿಎ ರಚನೆ ಮಾಡಿದ್ದರೂ, ಚುನಾವಣೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.
ಪ್ರಸ್ತುತ ಜಿಬಿಎಗೆ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ, ಆಡಳಿತಾಧಿಕಾರಿಗಳ ಮೂಲಕವೇ ನಗರ ಆಡಳಿತ ಮುಂದುವರಿಯುತ್ತಿದೆ. ಸುಪ್ರೀಂ ಕೋರ್ಟ್ನ ಹೊಸ ಆದೇಶದಂತೆ ಡಿಸೆಂಬರ್ 31ರೊಳಗೆ ಚುನಾವಣೆ ಪೂರ್ಣಗೊಳಿಸಿ, ಜನಪ್ರತಿನಿಧಿಗಳ ಆಡಳಿತವನ್ನು ಮರುಸ್ಥಾಪಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.



