No menu items!
18.1 C
Munich
Saturday, July 18, 2026

ಕನ್ನಡ ಚಿತ್ರರಂಗಕ್ಕೆ ಆಘಾತ: ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ

Must read

ಕನ್ನಡ ಚಿತ್ರರಂಗಕ್ಕೆ ಆಘಾತ: ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಮಧ್ಯಾಹ್ನ ಸುಮಾರು 2 ಗಂಟೆಗೆ ಬೆಂಗಳೂರಿನ ವೈಯ್ಯಾಲಿಕಾವಲ್ನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಅವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ಹಿರಿಯ ನಟ ಶ್ರೀಶೈಲನ್ ಅವರ ಪತ್ನಿಯಾಗಿದ್ದ ಶೈಲಜಾ ಶ್ರೀಶೈಲನ್ ಅವರು ಪುತ್ರ ಶ್ರೀಕಾಂತ್ ಹಾಗೂ ಪುತ್ರಿ ಶ್ರೀವಾಣಿ ಅವರನ್ನು ಅಗಲಿದ್ದಾರೆ. ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ಸಹಜ ಅಭಿನಯದ ಮೂಲಕ ಸಿನಿಪ್ರಿಯರ ಮನಗೆದ್ದಿದ್ದರು.
‘ಎ’, ‘ಪುಟ್ಟ ಹೆಂಡ್ತಿ’, ‘ಗೃಹಪ್ರವೇಶ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಅನಂತನ ಅವಾಂತರ’, ‘ಉಪ್ಪಿ 2’ ಸೇರಿದಂತೆ ನೂರಾರು ಕನ್ನಡ ಸಿನಿಮಾಗಳಲ್ಲಿ ಅವರು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದರು. ವಿಶೇಷವಾಗಿ ನಟ ಉಪೇಂದ್ರ ಅವರ ಅನೇಕ ಸಿನಿಮಾಗಳಲ್ಲಿ ತಾಯಿ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
ಸಿನಿಮಾಗಳಷ್ಟೇ ಅಲ್ಲದೆ, ‘ಮುಕ್ತ’, ‘ಮಾಯಾಮೃಗ’ ಸೇರಿದಂತೆ ಹಲವು ಜನಪ್ರಿಯ ಕನ್ನಡ ಧಾರಾವಾಹಿಗಳಲ್ಲೂ ನಟಿಸಿ ಕಿರುತೆರೆಯಲ್ಲೂ ತಮ್ಮದೇ ಆದ ಗುರುತು ಮೂಡಿಸಿದ್ದರು. ಅವರ ಅಭಿನಯ ಮತ್ತು ಸರಳ ವ್ಯಕ್ತಿತ್ವ ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಸದಾ ನೆನಪಾಗಲಿದೆ.
ಶೈಲಜಾ ಶ್ರೀಶೈಲನ್ ಅವರ ಅಂತ್ಯಕ್ರಿಯೆಯನ್ನು ಇಂದು ಬೆಂಗಳೂರಿನ ಶ್ರೀರಾಂಪುರ ವಿದ್ಯುತ್ ಚಿತಾಗಾರದಲ್ಲಿ ಕುಟುಂಬಸ್ಥರು, ಬಂಧು-ಬಳಗ ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.

- Advertisement -spot_img

More articles

- Advertisement -spot_img

Latest article