ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗೆ 3 ವರ್ಷ ಜೈಲು; ಶಿಕ್ಷೆ ಬಳಿಕ ಗಡಿಪಾರಿಗೆ ಕೋರ್ಟ್ ಆದೇಶ
ರಾಯಚೂರು: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಹಲವು ವರ್ಷಗಳಿಂದ ರಾಯಚೂರು ಜಿಲ್ಲೆಯಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಸಿಂಧನೂರಿನ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿದೆ. ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಆರೋಪಿಯನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
ದೋಷಿ ಶೋರನಜೀತ್ ಮಂಡಲ್ ಬಾಂಗ್ಲಾದೇಶದ ನಾಗರಿಕನಾಗಿದ್ದು, ಸುಮಾರು 10ರಿಂದ 12 ವರ್ಷಗಳ ಹಿಂದೆ ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಪ್ರವೇಶಿಸಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಬಳಿಕ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಎಚ್. ನಂ.3 ಕ್ಯಾಂಪ್ನಲ್ಲಿ ಅನಧಿಕೃತವಾಗಿ ನೆಲೆಸಿದ್ದ ಎನ್ನಲಾಗಿದೆ.
ತನಿಖೆ ಪ್ರಕಾರ, ಬಾಂಗ್ಲಾದೇಶದಲ್ಲಿರುವ ತನ್ನ ತಂದೆ-ತಾಯಿಯನ್ನು ಭೇಟಿ ಮಾಡಲು ಭಾರತೀಯ ಪ್ರಜೆಯಂತೆ ಗುರುತಿಸಿಕೊಳ್ಳುವ ಉದ್ದೇಶದಿಂದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆದು, ಬ್ಯಾಂಕ್ ಖಾತೆ ತೆರೆಯುವ ಮೂಲಕ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅದರ ಆಧಾರದ ಮೇಲೆ ಪಾಸ್ಪೋರ್ಟ್ ಕೂಡ ಪಡೆದಿದ್ದ.
ಆದರೆ, 2018ರ ಜೂನ್ 17ರಂದು ದೇಶದಿಂದ ಹೊರಡುವ ವೇಳೆ ಇಮಿಗ್ರೇಶನ್ ಅಧಿಕಾರಿಗಳು ಪಾಸ್ಪೋರ್ಟ್ ಪರಿಶೀಲಿಸಿದಾಗ ಆತ ಭಾರತೀಯ ಪ್ರಜೆಯಲ್ಲ ಎಂಬುದು ಪತ್ತೆಯಾಯಿತು. ತಕ್ಷಣವೇ ಪಾಸ್ಪೋರ್ಟ್ ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಯಿತು.
ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಪೊಲೀಸ್ ಅಧಿಕಾರಿಗಳಾದ ಸಿದ್ದರಾಮೇಶ್ವರ ಗಡೇದ್ ಮತ್ತು ರಾಘವೇಂದ್ರ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ರೂಪಾ ಸಿ. ವಗ್ಗಾ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗೆ ಮೂರು ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಜೊತೆಗೆ ಶಿಕ್ಷೆ ಪೂರ್ಣಗೊಂಡ ಬಳಿಕ ಆರೋಪಿಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಗಲಪರ್ವಿ ಹನುಮೇಶ ವಾದ ಮಂಡಿಸಿದ್ದು, ಪೊಲೀಸ್ ಸಿಬ್ಬಂದಿ ರಾಘವೇಂದ್ರ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿದ್ದರು.



