No menu items!
23.6 C
Munich
Tuesday, July 28, 2026

ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಕೆ ಆರೋಪ: ಮಾಜಿ ಕೆಪಿಎಸ್ಸಿ ಅಧ್ಯಕ್ಷರ ಪುತ್ರಿಗೆ ಹೈಕೋರ್ಟ್ ತೀವ್ರ ತರಾಟೆ

Must read

ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಕೆ ಆರೋಪ: ಮಾಜಿ ಕೆಪಿಎಸ್ಸಿ ಅಧ್ಯಕ್ಷರ ಪುತ್ರಿಗೆ ಹೈಕೋರ್ಟ್ ತೀವ್ರ ತರಾಟೆ

ಬೆಂಗಳೂರು: ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ 3ಬಿ ಮೀಸಲಾತಿ ಕೋಟಾದಡಿ ನೇಮಕಾತಿ ಪಡೆಯಲು ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಮಾಜಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿತು.
ಹಿಂದುಳಿದ ವರ್ಗಗಳ 3ಬಿ ಮೀಸಲಾತಿ ಅಡಿಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ಕುಟುಂಬದ ವಾರ್ಷಿಕ ಆದಾಯ ಕೇವಲ ₹40 ಸಾವಿರ ಎಂದು ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಇದನ್ನು ಪ್ರಶ್ನಿಸಿದ ನ್ಯಾಯಪೀಠ, “ಕೆಪಿಎಸ್ಸಿ ಅಧ್ಯಕ್ಷರ ವಾರ್ಷಿಕ ಆದಾಯ ಕೇವಲ ₹40 ಸಾವಿರವೇ? ಅವರ ಮಾಸಿಕ ಸಂಬಳವೇ ಸುಮಾರು ₹2.70 ಲಕ್ಷ. ವಾರ್ಷಿಕ ಆದಾಯ ಸುಮಾರು ₹30 ಲಕ್ಷ ಇರುವಾಗ ಈ ಸತ್ಯವನ್ನು ಮರೆಮಾಚಿ ಸುಳ್ಳು ಪ್ರಮಾಣಪತ್ರ ಹೇಗೆ ಸಲ್ಲಿಸಲಾಯಿತು?” ಎಂದು ತೀವ್ರವಾಗಿ ಪ್ರಶ್ನಿಸಿತು.
ಮೇಲ್ನೋಟಕ್ಕೆ ಇದು ವಂಚನೆ ಎಂಬುದು ಸ್ಪಷ್ಟವಾಗಿದ್ದು, ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸುವ ಮೂಲಕ ಅರ್ಹ ಹಾಗೂ ಬಡ ಅಭ್ಯರ್ಥಿಯೊಬ್ಬರಿಗೆ ಸರ್ಕಾರಿ ಉದ್ಯೋಗ ಸಿಗುವ ಅವಕಾಶವನ್ನು ಕಸಿದುಕೊಳ್ಳಲಾಗಿದೆ ಎಂದು ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಇದೇ ವೇಳೆ, ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪದೇ ಪದೇ ಅಕ್ರಮಗಳು ಬೆಳಕಿಗೆ ಬರುತ್ತಿರುವುದನ್ನೂ ನ್ಯಾಯಪೀಠ ಉಲ್ಲೇಖಿಸಿತು. ಅರ್ಜಿದಾರರು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದು, ಅರ್ಜಿಯ ಘೋಷಣಾ ಪತ್ರದಲ್ಲಿಯೂ ತಪ್ಪು ಮಾಹಿತಿ ನೀಡಿ ನೈಜ ಸಂಗತಿಯನ್ನು ಮರೆಮಾಚಿರುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ಪ್ರಶ್ನಿಸಿತು.
ತಪ್ಪೇ ಮಾಡಿಲ್ಲ ಎನ್ನುವುದಾದರೆ ತನಿಖೆ ನಡೆಯಲು ಅವಕಾಶ ನೀಡಿ. ತನಿಖೆಯ ಬಳಿಕ ನಿರ್ದೋಷಿ ಎಂದು ಸಾಬೀತಾದರೆ ಹೊರಬನ್ನಿ. ಎಫ್ಐಆರ್ನಲ್ಲಿ ಕಾನೂನು ಲೋಪಗಳಿವೆ ಎಂದು ಹೇಳಿ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ನ್ಯಾಯಪೀಠದ ಕಟು ಅಭಿಪ್ರಾಯಗಳ ಬಳಿಕ ಸುಮಾ ಸಾಹುಕಾರ್ ಪರ ವಕೀಲರು ಅರ್ಜಿಯನ್ನು ಹಿಂಪಡೆದರು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಎಫ್ಐಆರ್ ದಾಖಲಿಸುವ ಮೊದಲು ಆದಾಯ ಮತ್ತು ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಯಿಂದ ವಿಚಾರಣೆ ನಡೆಸಬೇಕಿತ್ತು. ಆ ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ನೇರವಾಗಿ ಎಫ್ಐಆರ್ ದಾಖಲಿಸಿರುವುದರಿಂದ ಅದು ಊರ್ಜಿತವಾಗುವುದಿಲ್ಲ ಎಂದು ವಾದಿಸಿದರು.
ಅಲ್ಲದೆ, ದಾಖಲೆಗಳ ಪರಿಶೀಲನೆ ವೇಳೆ ಆದಾಯ ಪ್ರಮಾಣಪತ್ರದ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ, ಕುಟುಂಬದ ಆದಾಯದ ಬದಲಿಗೆ ವೈಯಕ್ತಿಕ ಆದಾಯವನ್ನು ತಪ್ಪಾಗಿ ನಮೂದಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಬಳಿಕ ಅರ್ಜಿದಾರರು ನೇಮಕಾತಿ ಪ್ರಕ್ರಿಯೆಯಿಂದ ತಮ್ಮ ಅಭ್ಯರ್ಥಿತನವನ್ನು ಹಿಂಪಡೆದಿರುವುದರಿಂದ ಇತರ ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಭ್ಯರ್ಥಿ ನಂತರ ಅಭ್ಯರ್ಥಿತನ ಹಿಂಪಡೆದರೆ ಮಾಡಿದ ತಪ್ಪು ಸರಿಯಾಗುವುದಿಲ್ಲ. ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿತ್ತೇ? ಸುಳ್ಳು ದಾಖಲೆ ಸಲ್ಲಿಸುವ ಮೂಲಕ ಅರ್ಹ ಅಭ್ಯರ್ಥಿಯೊಬ್ಬರ ಭವಿಷ್ಯಕ್ಕೆ ಧಕ್ಕೆ ತಂದಿರುವುದು ಗಂಭೀರ ವಿಷಯ ಎಂದು ಕಿಡಿಕಾರಿತು.

- Advertisement -spot_img

More articles

- Advertisement -spot_img

Latest article