No menu items!
16.8 C
Munich
Tuesday, July 28, 2026

ಪತ್ನಿಗೆ ನೇಣು ಬಿಗಿದು ಅತ್ತೆ-ಮಾವನಿಗೆ ವೀಡಿಯೋ ಕಾಲ್ ಮಾಡಿ ತೋರಿಸಿದ ಸೈಕೋ ಪತಿ ; ಬೀಳಗಿಯಲ್ಲಿ ಅಮಾನವೀಯ ಕೃತ್ಯ

Must read

ಬಾಗಲಕೋಟೆ ಜಿಲ್ಲೆ ಬೆಚ್ಚಿ ಬೀಳುವಂತಹ ಅತ್ಯಂತ ಭೀಕರ ಹಾಗೂ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧದ ಶಂಕೆಯಿಂದ ಮನಸ್ಸಿನಲ್ಲಿ ಕ್ರೂರತೆ ತುಂಬಿಕೊಂಡ ಪತಿಯೊಬ್ಬ, ಪತ್ನಿಗೆ ನೇಣು ಬಿಗಿದು ಆಕೆ ಪ್ರಾಣಸಂಕಟದಿಂದ ಒದ್ದಾಡುತ್ತಿದ್ದರೂ ಕಾಪಾಡಲು ಮುಂದಾಗದೇ, ಆ ಘಟನೆಯನ್ನು ವೀಡಿಯೋ ಮಾಡಿ ಅತ್ತೆ-ಮಾವನಿಗೆ ತೋರಿಸಿರುವ ಅಮಾನವೀಯ ಘಟನೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.

23 ವರ್ಷದ ಭಾಗ್ಯಶ್ರೀ ದುರಂತ ಅಂತ್ಯ: ವಿಕೃತ ಪತಿಯ ಅಸಲಿ ಮುಖವಾಡ

ಈ ಭೀಕರ ಕೃತ್ಯದಲ್ಲಿ ಬಲಿಯಾದ ದುರ್ದೈವಿ ಮಹಿಳೆ 23 ವರ್ಷದ ಭಾಗ್ಯಶ್ರೀ ಜಿಗಳೂರು. ಹತ್ಯೆಗೈದ ಆರೋಪಿ ಪತಿಯನ್ನು ಪ್ರವೀಣ್ ಜಿಗಳೂರು ಎಂದು ಗುರುತಿಸಲಾಗಿದೆ. ಇವರಿಬ್ಬರ ಮದುವೆಯಾಗಿ 6 ವರ್ಷಗಳಾಗಿದ್ದು, ಒಂದು ಮುದ್ದಾದ ಗಂಡು ಮಗುವಿದೆ. ಹೊರನೋಟಕ್ಕೆ ಚೆನ್ನಾಗಿಯೇ ಕಾಣಿಸುತ್ತಿದ್ದ ಈ ಸಂಸಾರದಲ್ಲಿ ಅನೈತಿಕ ಸಂಬಂಧದ ಅನುಮಾನ ಎಂಬ ಬೆಂಕಿ ಬಿದ್ದಿತ್ತು. ಇದೇ ಕಾರಣಕ್ಕೆ ದಂಪತಿ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು.

ಚೆನ್ನಾಗಿ ಬಾಳೋಣ ಬಾ ಎಂದು ತವರು ಮನೆಯಿಂದ ಕರೆತಂದಿದ್ದ ಪ್ರವೀಣ್

ಪತಿಯ ಕಿರುಕುಳ ತಾಳಲಾರದೆ ಭಾಗ್ಯಶ್ರೀ ಕಳೆದ ಎರಡು ತಿಂಗಳ ಹಿಂದೆ ತವರುಮನೆಯಾದ ಮಹಾಲಿಂಗಪುರಕ್ಕೆ ತೆರಳಿದ್ದರು. ಆದರೆ, ಇನ್ಮುಂದೆ ಚೆನ್ನಾಗಿ ಕೂಡಿ ಬಾಳೋಣ, ಯಾವುದೇ ತೊಂದರೆ ಕೊಡುವುದಿಲ್ಲ ಎಂದು ನಂಬಿಸಿದ ಪತಿ ಪ್ರವೀಣ್, ಜುಲೈ 27 ರಂದು ಆಕೆಯನ್ನು ಗಲಗಲಿ ಗ್ರಾಮಕ್ಕೆ ಕರೆತಂದಿದ್ದ. ಆದರೆ ಆತ ಹೆಂಡತಿಯನ್ನು ಕರೆತಂದದ್ದು ಚೆನ್ನಾಗಿ ಸಂಸಾರ ಮಾಡಲಲ್ಲ, ಬದಲಿಗೆ ಆಕೆಯ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನುವುದು ಅದೇ ದಿನ ಸಂಜೆ ಗೊತ್ತಾಗಿದೆ.

ಕಟ್ಟಿಗೆಯಿಂದ ಹಲ್ಲೆ ನಡೆಸಿ ನೇಣು ಕುಣಿಕೆಗೆ ತಳ್ಳಿದ ಅಮಾನವೀಯ ಪತಿ

ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ದಂಪತಿ ನಡುವೆ ಮತ್ತೆ ಜಗಳ ಆರಂಭವಾಗಿದೆ. ಕೋಪೋದ್ರೇಕಗೊಂಡ ಪ್ರವೀಣ್, ಪತ್ನಿ ಭಾಗ್ಯಶ್ರೀ ಮೇಲೆ ಕಟ್ಟಿಗೆಯಿಂದ ರಕ್ತ ಬರುವಂತೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ಆತನ ವಿಕೃತ ಮನಸ್ಸು ಶಾಂತವಾಗಲಿಲ್ಲ. ಹಲ್ಲೆಯಿಂದ ಅರೆಜೀವವಾಗಿದ್ದ ಆಕೆಗೆ ಬಲವಂತವಾಗಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದಾನೆ.

ಪ್ರಾಣಸಂಕಟದಲ್ಲಿ ಒದ್ದಾಡ್ತಿದ್ರೂ ಅತ್ತೆ-ಮಾವನಿಗೆ ವೀಡಿಯೋ ಕಾಲ್ ಮಾಡಿ ತೋರಿಸಿದ!

ನೇಣು ಕುಣಿಕೆಯಲ್ಲಿ ಜೋತಾಡುತ್ತಿದ್ದ ಭಾಗ್ಯಶ್ರೀ ಉಸಿರುಗಟ್ಟಿ ಪ್ರಾಣ ಬಿಡಲು ಒದ್ದಾಡುತ್ತಿದ್ದಾಗ, ಪ್ರವೀಣ್ ಆಕೆಯನ್ನು ರಕ್ಷಿಸುವ ಬದಲು ಮೊಬೈಲ್‌ನಲ್ಲಿ ವೀಡಿಯೋ ಕಾಲ್ ಮಾಡಿದ್ದಾನೆ. ನೇರವಾಗಿ ಭಾಗ್ಯಶ್ರೀ ಅವರ ತಾಯಿ-ತಂದೆಗೆ ವೀಡಿಯೋ ಕಾಲ್ ಮಾಡಿ, ನೋಡಿ ನಿಮ್ಮ ಮಗಳು ಹೇಗೆ ಒದ್ದಾಡ್ತಿದ್ದಾಳೆ ಎಂದು ತೋರಿಸಿದ್ದಾನೆ. ಅಷ್ಟೇ ಅಲ್ಲದೆ, ಆ ಭೀಕರ ದೃಶ್ಯವನ್ನು ವೀಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾನೆ. ಈ ವೀಡಿಯೋದಲ್ಲಿ ನೇಣು ಕುಣಿಕೆಯ ಹಿಂಭಾಗದ ಗೋಡೆಯ ಮೇಲಿದ್ದ ಇಬ್ಬರ ಮದುವೆಯ ಶುಭಕೋರುವ ಹೆಸರುಗಳೂ ಸೆರೆಯಾಗಿರುವುದು ದುರಂತದ ಪರಾಕಾಷ್ಠೆ.

ಪೊಲೀಸ್ ಕಸ್ಟಡಿಯಲ್ಲಿ ಆರೋಪಿ: ಎಸ್‌.ಪಿ. ಸಿದ್ಧಾರ್ಥ್ ಗೋಯೆಲ್ ಸ್ಥಳಕ್ಕೆ ಭೇಟಿ

ವಿಷಯ ತಿಳಿಯುತ್ತಿದ್ದಂತೆಯೇ ಬೀಳಗಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ಧಾರ್ಥ್ ಗೋಯೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರವೀಣ್‌ನನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದು, ಘಟನಾ ಸ್ಥಳದಲ್ಲಿದ್ದ ಮೊಬೈಲ್ ಹಾಗೂ ವೀಡಿಯೋ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಟುಂಬಸ್ಥರ ಕಣ್ಣೀರು

ಭಾಗ್ಯಶ್ರೀ ಕುಟುಂಬಸ್ಥರು ಪ್ರವೀಣ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದು, ಆತನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ. ಪತಿಯು ಅನುಮಾನದ ಭೂತ ತಲೆಗೇರಿಸಿಕೊಂಡು ಮಗಳನ್ನು ತವರು ಮನೆಯಿಂದ ಕರೆತಂದು ಅಮಾನವೀಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆಕೆ ಪ್ರಾಣ ಬಿಡುವಾಗ ನಮಗೆ ವೀಡಿಯೋ ಕಾಲ್ ಮಾಡಿ ತೋರಿಸಿ ರಾಕ್ಷಸನಂತೆ ವರ್ತಿಸಿದ್ದಾನೆ ಎಂದು ಮೃತಳ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಬೀಳಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -spot_img

More articles

- Advertisement -spot_img

Latest article