ರಸ್ತೆಯಲ್ಲಿ ಮೊಳೆ ಚೆಲ್ಲಿ ವಾಹನಗಳನ್ನು ಪಂಚರ್ ಮಾಡುತ್ತಿದ್ದ ಇಬ್ಬರು ಪೊಲೀಸರ ಬಲೆಗೆ!
ಬೆಂಗಳೂರು: ವಾಹನಗಳ ಪಂಚರ್ ದುರಸ್ತಿಯ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಪಾದಿಸಲು ರಸ್ತೆಯಲ್ಲೇ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ವಾಹನಗಳನ್ನು ಪಂಚರ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜಾಲಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ, ಬಂಧಿತ ಆರೋಪಿಗಳು ಜಾಲಹಳ್ಳಿಯ ಎಂಇಎಸ್ ರಿಂಗ್ ರಸ್ತೆ ಬದಿಯಲ್ಲಿ ಪಂಚರ್ ಅಂಗಡಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಮ್ಮ ಅಂಗಡಿಗೆ ಹೆಚ್ಚಿನ ಗ್ರಾಹಕರು ಬರಬೇಕು ಎಂಬ ಉದ್ದೇಶದಿಂದ ಬೈಕ್ನಲ್ಲಿ ಬಂದು ರಸ್ತೆಯುದ್ದಕ್ಕೂ ಕೆಜಿಗಟ್ಟಲೆ ಮೊಳೆಗಳನ್ನು ಚೆಲ್ಲಿ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆಯಲ್ಲಿ ಮೊಳೆಗಳಿಂದ ವಾಹನಗಳು ಪಂಚರ್ ಆದ ಬಳಿಕ, ಸವಾರರು ವಾಹನಗಳನ್ನು ತಳ್ಳಿಕೊಂಡು ಬಂದಾಗ ಆರೋಪಿಗಳು ಅಲ್ಲೇ ಪ್ರತ್ಯಕ್ಷರಾಗಿ ಪಂಚರ್ ಹಾಕಿಕೊಡುವ ನಾಟಕವಾಡುತ್ತಿದ್ದರು. ಈ ಮೂಲಕ ವ್ಯಾಪಾರ ಹೆಚ್ಚಿಸಿಕೊಳ್ಳಲು ಸಂಚು ರೂಪಿಸಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಒಂದೇ ಪ್ರದೇಶದಲ್ಲಿ ನಿರಂತರವಾಗಿ ವಾಹನಗಳು ಪಂಚರ್ ಆಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ ರಸ್ತೆಯಲ್ಲಿ ಅಪಾರ ಪ್ರಮಾಣದ ಮೊಳೆಗಳು ಪತ್ತೆಯಾಗಿದ್ದವು.
ಅನುಮಾನಗೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಬೈಕ್ನಲ್ಲಿ ಬಂದು ರಸ್ತೆಗೆ ಮೊಳೆಗಳನ್ನು ಚೆಲ್ಲುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿದ್ದವು.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಜಾಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಸ್ತುತ ಬಂಧಿತ ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ಇದೇ ರೀತಿಯ ಘಟನೆಗಳನ್ನು ಬೇರೆಡೆ ನಡೆಸಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



