No menu items!
32.4 C
Munich
Thursday, July 30, 2026

ಬೆಂಗಳೂರಿನ ‘ಬಾಬ್ಸ್‌ ಬಾರ್’ನಲ್ಲಿ ಹಗಲು ದರೋಡೆ, ಗ್ಯಾಸ್ ಚಾರ್ಜ್‌ ಹೆಸರಿನಲ್ಲಿ ಗ್ರಾಹಕರಿಗೆ ಪಂಗನಾಮ ; ನಿಮ್ಮ TNITಯಲ್ಲಿ ಅಕ್ರಮ ದಂಧೆ ಬಯಲು

Must read

ನಿಜ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪಾದನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎನ್ನುವುದಷ್ಟೇ ಇವರ ಉದ್ದೇಶವಾಗಿರುತ್ತೆ. ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟು ಹೆಜ್ಜೆ ಹೆಜ್ಜೆಗೂ ಇಲ್ಲಿ ಹಲವರು ಮಹಾ ಮೋಸ ಮಾಡುತ್ತಾರೆ. ಅದರಲ್ಲಿಯೂ ನಮ್ಮ ದೇಶದಲ್ಲಿ ಮೋಸದ ಬಲೆ ಬೀಸುವುದು ತುಂಬಾನೇ ಸುಲಭ. ವ್ಯವಸ್ಥೆಯ ವೈಫಲ್ಯವನ್ನೇ ಇಲ್ಲಿ ಹಲವರು ದುಡ್ಡು ಮಾಡಲು ಉಪಯೋಗಿಸುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೇ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಪ್ರಸಿದ್ಧ ‘ಬಾಬ್ಸ್ ಬಾರ್’ (Bob’s Bar)ನಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರ ಪದ್ದತಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ವರ್ಷದ ಆರಂಭದಲ್ಲಿ ಅಂದರೆ ಮಾರ್ಚ್‌ ಆಸು-ಪಾಸು, ಭಾರತದಲ್ಲಿ ಗ್ಯಾಸ್ ಅಭಾವ ಸೃಷ್ಟಿಯಾಗಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ನೆಪವೊಡ್ಡಿ ಸುಲಿಗೆಗೆ ಮುಂದಾಗಿದ್ದರು. ಕೆಲವು ಪ್ರತಿಷ್ಠಿತ ಹೋಟೆಲ್‌ಗಳು ಗ್ರಾಹಕರ ಬಿಲ್‌ನಲ್ಲಿ ಪ್ರತ್ಯೇಕವಾಗಿ ‘ಗ್ಯಾಸ್ ಚಾರ್ಜ್’ ಹೆಸರಿನಲ್ಲಿ 20 ರಿಂದ 50 ರೂಪಾಯಿಗಳವರೆಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದನ್ನು ಅಪ್ರಾಮಾಣಿಕ ವ್ಯಾಪಾರ ಪದ್ಧತಿ ಎಂದು ಸರ್ಕಾರ ಪರಿಗಣಿಸಿತ್ತು.

ಇಷ್ಟೇ ಅಲ್ಲದೇ ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಈ ಹೊರೆಯನ್ನು ಗ್ರಾಹಕರ ಮೇಲೆ ನೇರವಾಗಿ ‘ಗ್ಯಾಸ್ ಶುಲ್ಕ’ ಎಂಬ ಹೆಸರಿನಲ್ಲಿ ಹಾಕುವುದು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಉಲ್ಲಂಘನೆಯಾಗುತ್ತದೆ ಎಂದು ಪ್ರಾಧಿಕಾರ ಎಚ್ಚರಿಸಿತ್ತು. ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಕೂಡ ಹೊರಡಿಸಿತ್ತು. ಆದರೆ, ಈ ನಿಯಮ, ಮಾರ್ಗಸೂಚಿ ಕೇವಲ ಪೇಪರ್ ಗೆ ಮಾತ್ರ ಸೀಮಿತವಾಗಿದೆ. ಕಾನೂನಿನ ಭಯ ಇಲ್ಲದೆ ಹಲವರು ಗ್ಯಾಸ್ ಹೆಸರಿನಲ್ಲಿ ಇನ್ನೂ ಗ್ರಾಹಕರ ನಂಬಿಕೆಗೆ ದ್ರೋಹ ಎಸಗುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿದ್ದಾರೆ. ‘ಬಾಬ್ಸ್ ಬಾರ್’ ನಲ್ಲಿ ನಡೆಯುತ್ತಿರುವುದು ಇದೇ.

ಬೆಳಕಿಗೆ ಬಂತು ಶಾಕಿಂಗ್ ಲೂಟಿ: ಕಮ್ಮನಹಳ್ಳಿಯ ‘ಬಾಬ್ಸ್ ಬಾರ್’ನಲ್ಲಿ 10% ಗ್ಯಾಸ್ ಚಾರ್ಜ್ ಸುಲಿಗೆ

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ BYG Ventures (Bob’s Bar) ‘ಬಾಬ್ಸ್‌ ಬಾರ್’ಗೆ ನಿಮ್ಮ TNIT ತಂಡ ಇತ್ತೀಚೆಗೆ ಹೋಗಿತ್ತು. ಈ ಸಮಯದಲ್ಲಿ ನಮಗೆ ನೀಡಲಾದ ಬಿಲ್‌ನ ನಾವು ಪರಿಶೀಲನೆ ಮಾಡಿದ್ವಿ. ಆಗ ನಮಗಾಗಿದ್ದು ಅಕ್ಷರಶಃ ಆಘಾತ. ಯಾಕೆಂದರೆ ಇನ್ವಾಯ್ಸ್‌ನಲ್ಲಿ (Invoice No: 924506), ಬಿಲ್‌ನ ಕೊನೆಯಲ್ಲಿ ‘Tax Summary’ ವಿಭಾಗದಲ್ಲಿ 10% Gas Surcharge (₹175.23) ಅನ್ನು ಅಕ್ರಮವಾಗಿ ಸೇರಿಸಲಾಗಿತ್ತು.

ಒಂದು ಕಡೆ ₹257.18 ಸೇವಾ ಶುಲ್ಕ (Service Charge) ವಸೂಲಿ ಮಾಡಿದ್ದರೆ, ಇನ್ನೊಂದೆಡೆ ಯಾವುದೇ ಮುನ್ಸೂಚನೆಯಿಲ್ಲದೆ ನೇರವಾಗಿ 10% ಗ್ಯಾಸ್ ಸರ್ಚಾರ್ಜ್ ಹೆಸರಿನಲ್ಲಿ ₹175ಗೂ ಹೆಚ್ಚು ಹಣವನ್ನು ನಮ್ಮ ಖಾತೆಗೆ ಸೇರಿಸಲಾಗಿತ್ತು. ಪ್ರಶ್ನೆ ಮಾಡಿದರೆ ಉಡಾಫೆಯ ಉತ್ತರ ಬೇರೆ. ಇದು ಕೇವಲ ತಾಂತ್ರಿಕ ತಪ್ಪಲ್ಲ, ಬದಲಿಗೆ ನಿಮ್ಮ ಜೇಬಿಗೆ ವ್ಯವಸ್ಥಿತವಾಗಿ ಹಾಕಲಾಗುತ್ತಿರುವ ಕನ್ನ, ನಿಮ್ಮಿಂದ ಅಕ್ರಮವಾಗಿ ಹಣ ಕಸಿಯುವ ಪಕ್ಕಾ ಪ್ಲಾನ್ ಎನ್ನುವುದನ್ನು ನಾವು ಮತ್ತೆ ನಿಮಗೆ ಪ್ರತೈಕವಾಗಿ ಹೇಳಬೇಕಿಲ್ಲ.

ಕಾನೂನು ಏನು ಹೇಳುತ್ತದೆ? ‘ಗ್ಯಾಸ್ ಚಾರ್ಜ್’ ವಸೂಲಿ ಶೇ. 100ರಷ್ಟು ಅಕ್ರಮ!

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಯಾವುದೇ ರೆಸ್ಟೋರೆಂಟ್ ಅಥವಾ ಪಬ್ ಬಿಲ್‌ನಲ್ಲಿ ಮೆನು ದರ ಮತ್ತು ನಿಯಮಾನುಸಾರ ಜಿಎಸ್‌ಟಿ (GST) ಹೊರತುಪಡಿಸಿ ಯಾವುದೇ ಹೆಚ್ಚುವರಿ ‘LPG Surcharge’ ಅಥವಾ ಕಡ್ಡಾಯ ಶುಲ್ಕಗಳನ್ನು ವಸೂಲಿ ಮಾಡುವಂತಿಲ್ಲ.

ಗ್ಯಾಸ್ ಸಿಲಿಂಡರ್ ಅಥವಾ ವಿದ್ಯುತ್ ಬಿಲ್ ಎಂಬುದು ಉದ್ಯಮ ನಡೆಸಲು ತಗುಲುವ ‘ಆಂತರಿಕ ವೆಚ್ಚ’ (Operational Cost). ಉದಾಹರಣೆಗೆ, ನಾಳೆ ಹೋಟೆಲ್‌ನವರು “ವೇಟರ್‌ಗೆ ಸಂಬಳ ನೀಡಬೇಕು” ಅಥವಾ “ಎಸಿ (AC) ಹಾಕಿದ್ದೇವೆ” ಎಂದು ಪ್ರತ್ಯೇಕ ಸಾಲಿನಲ್ಲಿ ಹಣ ಸೇರಿಸಿದರೆ ಹೇಗೆ ಒಪ್ಪಲು ಸಾಧ್ಯವಿಲ್ಲವೋ, ಗ್ಯಾಸ್ ಚಾರ್ಜ್ ಕೂಡ ಹಾಗೆಯೇ. ಒಂದು ವೇಳೆ ಗ್ಯಾಸ್ ಬೆಲೆ ಏರಿಕೆಯಾದರೆ ಮೆನು ಕಾರ್ಡ್‌ನ ಆಹಾರದ ದರವನ್ನು ಏರಿಸುವ ಹಕ್ಕು ಹೋಟೆಲ್‌ನವರಿಗಿದೆ, ಆದರೆ ಬಿಲ್ ಕೆಳಗೆ ಕದ್ದುಮುಚ್ಚಿ ಶೇಕಡಾವಾರು ಹಣ ಸೇರಿಸುವುದು ‘ಅಪ್ರಾಮಾಣಿಕ ವ್ಯಾಪಾರ ಪದ್ಧತಿ’ (Unfair Trade Practice) ಎನಿಸಿಕೊಳ್ಳುತ್ತದೆ.

ಗ್ರಾಹಕರ ಮೌನವೇ ಇವರಿಗೆ ಬಂಡವಾಳ

‘ಬಾಬ್ಸ್ ಬಾರ್‌’ನಂತಹ ಜನಪ್ರಿಯ ಪಬ್‌ಗಳು ಈ ರೀತಿಯ ಲೂಟಿಯನ್ನು ಧೈರ್ಯವಾಗಿ ನಡೆಸಲು ಪ್ರಮುಖ ಕಾರಣ ಗ್ರಾಹಕರ ಮೌನ ಮತ್ತು ನಿರ್ಲಕ್ಷ್ಯ. ಪಾರ್ಟಿ ಅಥವಾ ಡಿನ್ನರ್ ಮುಗಿಸಿ ಹೊರಡುವಾಗ, ಕುಟುಂಬ ಅಥವಾ ಸ್ನೇಹಿತರ ಎದುರು ಜಗಳ ಆಡುವುದು ಬೇಡ ಎಂದು ಹೆಚ್ಚಿನವರು ₹175 ಹೆಚ್ಚುವರಿ ಬಂದರೂ ಗಮನಿಸದೆ ಅಥವಾ ಸುಮ್ಮನೆ ಯುಪಿಐ (UPI) ಮಾಡಿ ಹೊರಬರುತ್ತಾರೆ.

ಒಬ್ಬ ಗ್ರಾಹಕನಿಂದ ಪಡೆಯುವ ₹175 ಸಣ್ಣ ಮೊತ್ತವಾಗಿ ಕಾಣಿಸಬಹುದು, ಆದರೆ ನೂರಾರು ಟೇಬಲ್‌ಗಳು ಬರುವ ಕಮ್ಮನಹಳ್ಳಿಯಂತಹ ಏರಿಯಾದ ಬಾರ್‌ಗೆ ದಿನಕ್ಕೆ ಹತ್ತಾರು ಸಾವಿರ, ತಿಂಗಳಿಗೆ ಲಕ್ಷಾಂತರ ರೂಪಾಯಿ ಉಚಿತ, ಅಕ್ರಮ ಆದಾಯವಾಗುತ್ತದೆ. ಈ ಗ್ರಾಹಕ ಅಪನಂಬಿಕೆ ಹಾಗೂ ಸುಲಿಗೆಯನ್ನು ಮೆಟ್ಟಿ ನಿಲ್ಲದಿದ್ದರೆ, ನಾಳೆ ಇನ್ನಷ್ಟು ವಿಚಿತ್ರ ಹೆಸರಿನಲ್ಲಿ ಶುಲ್ಕಗಳನ್ನು ನಮ್ಮ ತಲೆಗೆ ಕಟ್ಟುತ್ತಾರೆ.

ಇನ್ನು ‘ಬಾಬ್ಸ್ ಬಾರ್’ ಬೆಂಗಳೂರಿನಲ್ಲಿ ಕೇವಲ ಕಮ್ಮನಹಳ್ಳಿಯಲ್ಲಿ ಮಾತ್ರ ಇಲ್ಲ. ಇಂದಿರಾ ನಗರ, ಕೋರಮಂಗಲ ಸೇರಿ ಇನ್ನೈದು ಕಡೆಯೂ ಇದೆ. ಯಾರಿಗೆ ಗೊತ್ತು ಕಮ್ಮನಹಳ್ಳಿಯಲ್ಲಿ ನಡೆಯುತ್ತಿರುವ ಈ ಹಗಲು ದರೋಡೆ, ಬೇರೆ ಬ್ರಾಂಚ್‌ಗಳಲ್ಲಿ ಕೂಡ ನಡೆಯುತ್ತಿರಬಹುದು. ಅಲ್ಲಿಯೂ ಕೂಡ ಎಲ್ಲರೂ ಕಣ್ಮುಚ್ಚಿ ಬಿಲ್ ಪಾವತಿಸಿ ಬರುತ್ತಿರಬಹುದು. ಒಬ್ಬೊಬ್ಬರಿಂದ ₹175 ರೂಪಾಯಿ ಅಂದರೆ ಈ 6 ಬ್ಯ್ರಾಂಚ್‌ಗಳಲ್ಲಿ ‘ಗ್ಯಾಸ್’ ಹೆಸರಿನಲ್ಲಿ ಮಾಡಲಾಗುತ್ತಿರುವ ಲೂಟಿ ಎಷ್ಟಿರಬಹುದು ಎನ್ನುವುದನ್ನು ನೀವೆ ಲೆಕ್ಕ ಹಾಕಿ.

ಅಕ್ರಮ ಬಿಲ್ ಕಂಡಾಗ ತಕ್ಷಣ ನೀವು ಏನು ಮಾಡಬೇಕು?

ನಿಮ್ಮ ಬಿಲ್‌ನಲ್ಲಿ ‘ಗ್ಯಾಸ್ ಸರ್‌ಚಾರ್ಜ್”, ‘ಫುಯೆಲ್ ಸರ್ ಚಾರ್ಜ್‌’ ಅಥವಾ ಕಡ್ಡಾಯ ‘ಸರ್ವಿಸ್ ಚಾರ್ಜ್‌’ ಕಂಡುಬಂದರೆ ತಕ್ಷಣ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ:

  • * ಬೆಂಬಲ ನಿರಾಕರಿಸಿ ಬಿಲ್ ತಿದ್ದುಪಡಿ ಮಾಡಿಸಿ: ಮ್ಯಾನೇಜರ್ ಬಳಿ ನೇರವಾಗಿ CCPA ಕಾಯ್ದೆಯನ್ನು ಉಲ್ಲೇಖಿಸಿ, ಅಕ್ರಮವಾಗಿ ಸೇರಿಸಲಾದ 10% ಗ್ಯಾಸ್ ಸರ್ಚಾರ್ಜ್ ಅನ್ನು ತೆಗೆದುಹಾಕಿ ಹೊಸ ಬಿಲ್ ನೀಡಲು ಪಟ್ಟು ಹಿಡಿಯಿರಿ.
  • *ಸಾಕ್ಷಿ ಸಂಗ್ರಹಿಸಿ: ‘ಬಾಬ್ಸ್ ಬಾರ್’ ಅಥವಾ ಬೇರೆ ಯಾವುದೇ ರೆಸ್ಟೋರೆಂಟ್ ಇದ್ದರೂ ಕೂಡ ಈ ಬಿಲ್‌ನಂತೆ ಪ್ರತಿಯೊಂದು ರಶೀದಿಯ ಸ್ಪಷ್ಟ ಫೋಟೋ ಹಾಗೂ ಸಾಕ್ಷಿಗಳನ್ನು ಕಲೆಹಾಕಿ.
  • ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಿ: 1915 ಉಚಿತ ಕರೆ ಸಂಖ್ಯೆಗೆ ಕರೆ ಮಾಡಿ ಅಥವಾ NCH App / UMANG App ಮೂಲಕ ನಿಮ್ಮ ಟೇಬಲ್‌ನಿಂದಲೇ ದೂರು ದಾಖಲಿಸಿ.
  • e-Jagriti ಪೋರ್ಟಲ್ ಬಳಸಿ: edaakhil.nic.in ಪೋರ್ಟಲ್‌ನಲ್ಲಿ ಅಥವಾ ಜಿಲ್ಲಾಧಿಕಾರಿಗಳಿಗೆ (District Collector) ನೇರವಾಗಿ ಲಿಖಿತ ದೂರು ಸಲ್ಲಿಸಿ ದಂಡ ವಿಧಿಸುವಂತೆ ಒತ್ತಾಯಿಸಿ.

ನಿಯಮ ಹೇಳುವುದೇನು ?

ಗ್ರಾಹಕ ಹಿತರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಸ್ಥಾಪಿತವಾಗಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ವಿಧಿಸುತ್ತಿರುವ ಹೆಚ್ಚುವರಿ “ಗ್ಯಾಸ್ ಶುಲ್ಕ”ಗಳ ವಿರುದ್ಧ ಅಧಿಕೃತ ಆದೇಶ ಹೊರಡಿಸಿದೆ. ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಬಂದಿರುವ ದೂರುಗಳ ಪ್ರಕಾರ, ಅನೇಕ ಹೋಟೆಲ್‌ಗಳು ಬಿಲ್‌ನಲ್ಲಿ “LPG charges”, “Gas surcharge”, “Fuel cost recovery” ಅಥವಾ “Gas crisis charge” ಎಂಬ ಹೆಸರುಗಳಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿವೆ. ಮೆನುವಿನಲ್ಲಿರುವ ಆಹಾರದ ಬೆಲೆ ಮತ್ತು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೆಸರಿನಲ್ಲಿ ಶುಲ್ಕ ವಿಧಿಸುವುದು ಗ್ರಾಹಕ ಹಿತರಕ್ಷಣಾ ಕಾಯ್ದೆಯ ಸೆಕ್ಷನ್ 18ರ ಅಡಿಯಲ್ಲಿ ಉಲ್ಲಂಘನೆಯಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಲಿ.

ಇನ್ನಾದರೂ ಜಾಗೃತರಾಗಿ, ಲೂಟಿಗೆ ಬ್ರೇಕ್ ಹಾಕಿ

ಪ್ರತಿಯೊಬ್ಬ ಗ್ರಾಹಕನೂ ತನ್ನ ಹಕ್ಕುಗಳ ಬಗ್ಗೆ ಜಾಗೃತನಾದಾಗ ಮಾತ್ರ ಇಂತಹ ದಂಧೆಕೋರರಿಗೆ ತಕ್ಕ ಪಾಠ ಕಲಿಸಲು ಸಾಧ್ಯ. ಇನ್ಮುಂದೆ ಪಬ್ ಅಥವಾ ರೆಸ್ಟೋರೆಂಟ್ ಬಿಲ್ ಕೈಗೆ ಸಿಕ್ಕಾಗ ಕಣ್ಣು ಮುಚ್ಚಿ ಹಣ ಪಾವತಿಸಬೇಡಿ, ಪ್ರತಿಯೊಂದು ‘Tax Summary’ ಸಾಲನ್ನೂ ಸೂಕ್ಷ್ಮವಾಗಿ ಗಮನಿಸಿ. ಅಕ್ರಮ ಕಂಡರೆ ಪ್ರಶ್ನೆ ಮಾಡಿ, ದೂರು ನೀಡಿ ಮತ್ತು ವ್ಯವಸ್ಥೆಯನ್ನು ಶುದ್ಧೀಕರಿಸಲು ಕೈಜೋಡಿಸಿ.

ನ್ಯಾಯದ ಪರ ಧ್ವನಿ ಎತ್ತಿ: ‘ಬಾಬ್ಸ್ ಬಾರ್’ ಅಕ್ರಮ ಲೂಟಿಗೆ ಒಟ್ಟಾಗಿ ಬ್ರೇಕ್ ಹಾಕೋಣ

ನಮಗೆ ಆದಂತೆ ‘ಬಾಬ್ಸ್ ಬಾರ್’ನಲ್ಲಿ ನಿಮಗೂ ಮೋಸ ಆಗಿದೆಯಾ..? ನಿಮ್ಮ ನಂಬಿಕೆಗೆ ‘ಬಾಬ್ಸ್ ಬಾರ್’ನಿಂದ ಧಕ್ಕೆ ಉಂಟಾಗಿದೆಯಾ..? ಹಾಗೇ ಇದ್ದಲ್ಲಿ, ನಿಮ್ಮ ಬಳಿ ಇರುವ ಬಿಲ್ ಪ್ರತಿಯನ್ನು (Bill Copy) ತಕ್ಷಣವೇ ನಮಗೆ ಕಳುಹಿಸಿಕೊಡಿ. ಯಾಕೆಂದರೆ, ಸಾರ್ವಜನಿಕರ ಜೇಬಿಗೆ ಕನ್ನ ಹಾಕುತ್ತಿರುವ ಈ ‘ಬಾಬ್ಸ್ ಬಾರ್’ ಅಕ್ರಮ ದಂಧೆಯ ವಿರುದ್ಧ ನಾವು ಕೇವಲ ಸುದ್ದಿ ಮಾಡುವುದಷ್ಟೇ ಅಲ್ಲ, ನೇರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ.’₹50 ಅಥವಾ ₹100 ತಾನೇ…’ ಎಂದು ನಾವು ಸುಮ್ಮನಿದ್ದರೆ, ಇಂತಹ ಹೈಟೆಕ್ ಲೂಟಿಕೋರರ ಧೈರ್ಯ ಇನ್ನಷ್ಟು ಹೆಚ್ಚಾಗುತ್ತದೆ. ನಿಮ್ಮ ಪ್ರತಿಯೊಂದು ಧ್ವನಿ ಮತ್ತು ಬಿಲ್ ಸಾಕ್ಷಿಯೂ ಈ ಕಾನೂನು ಸಮರಕ್ಕೆ ಆನೆಬಲ ತಂದೊಡ್ಡಲಿದೆ. ಮೋಸದ ವಿರುದ್ಧ ಮೌನ ಮುರಿಯಿರಿ. ಬನ್ನಿ, ಗ್ರಾಹಕರ ಹಕ್ಕುಗಳ ರಕ್ಷಣೆಗೆ ಒಂದಾಗಿ ಹೋರಾಡೋಣ.

- Advertisement -spot_img

More articles

- Advertisement -spot_img

Latest article