No menu items!
26.1 C
Munich
Saturday, August 1, 2026

ಹಾಯ್‌ ಫ್ರೆಂಡ್ : ಪ್ರಧಾನಿ ಸ್ಟೈಲ್ ಕಾಪಿ ಮಾಡಿ, ಮೋದಿಗೆ ತಿವಿದ ಪ್ರಕಾಶ್ ರಾಜ್

Must read

ದೇಶದಲ್ಲಿ ಸದಾ ಒಂದಲ್ಲ ಒಂದು ವಿಷಯಕ್ಕೆ ಧ್ವನಿ ಎತ್ತುತ್ತಾ, ಪ್ರಚಲಿತ ವಿದ್ಯಮಾನಗಳ ವಿರುದ್ಧ ಮುಕ್ತವಾಗಿ ಮಾತನಾಡುವ ನಟ ಪ್ರಕಾಶ್ ರಾಜ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೇರವಾಗಿ ಗುರಿಯಾಗಿಸಿಕೊಂಡು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿರುವ ವಿಶೇಷ ಸೆಲ್ಫಿ ವಿಡಿಯೋಗಳ ಶೈಲಿಯನ್ನೇ ಅನುಕರಿಸಿರುವ ಪ್ರಕಾಶ್ ರಾಜ್, ಹಾಯ್ ಫ್ರೆಂಡ್… ಎನ್ನುತ್ತಾ ವ್ಯಂಗ್ಯವಾಗಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಯುವಜನತೆ ಮತ್ತು ವಿದ್ಯಾರ್ಥಿಗಳ ವಿರುದ್ಧ ಕೈಗೊಳ್ಳಲಾಗುತ್ತಿರುವ ಕಠಿಣ ಪೊಲೀಸ್ ಕ್ರಮಗಳು ಹಾಗೂ ಪ್ರಕರಣಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಈ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಅವಾಚ್ಯ ಶಬ್ದ ಬಳಸಿದ ಯುವತಿ ಕೇಸ್: ಮಕ್ಕಳ ಮೇಲೆ ಕ್ರಿಮಿನಲ್ ಕೇಸ್ ಹಾಕ್ತೀರಾ?

ಫರಿದಾಬಾದ್ ಮೂಲದ ಯುವತಿಯೊಬ್ಬಳು ಪ್ರತಿಭಟನೆಯಲ್ಲಿ ಅವಾಚ್ಯ ಶಬ್ದ ಬಳಸಿದ್ದಾಳೆಂಬ ಕಾರಣಕ್ಕೆ ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಾದ ಬೆನ್ನಲ್ಲೇ ಈ ವಿಡಿಯೋ ಹೊರಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪ್ರಕಾಶ್ ರಾಜ್, ದೇಶದ ಪೋಷಕರ ಪರವಾಗಿ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದಿದ್ದಾರೆ. ಮಕ್ಕಳು ಹಿರಿಯರ ಮುಂದೆ ತಪ್ಪು ಮಾತನಾಡಿದಾಗ ಅಥವಾ ಅವಾಚ್ಯ ಪದ ಬಳಸಿದಾಗ, ಪೋಷಕರಾಗಿ ನಾವು ಅವರಿಗೆ ಎಚ್ಚರಿಕೆ ನೀಡುತ್ತೇವೆ, ತಿದ್ದಿ ಬುದ್ಧಿ ಹೇಳುತ್ತೇವೆ. ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ. ಅದನ್ನು ಬಿಟ್ಟು ಅವರ ವಿರುದ್ಧ ಕ್ರಿಮಿನಲ್ ಕೇಸ್ ಜಡಿದು, ಪೋಲಿಸರಿಂದ ಕಿರುಕುಳ ಕೊಡಿಸುವುದು ಯಾವ ನ್ಯಾಯ? ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ದೋಷಪೂರಿತ ವ್ಯವಸ್ಥೆಗೆ ಸರ್ಕಾರವೇ ಹೊಣೆ

ದೇಶದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ದಿನನಿತ್ಯ ವಿದ್ಯಾರ್ಥಿಗಳು, ಯುವಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಣ್ಣೆದುರೇ ಸಹಪಾಠಿಗಳು ಸಾಯುತ್ತಿರುವುದನ್ನು ಕಂಡು ಈ ದೇಶದ ಮಕ್ಕಳು ತೀವ್ರ ನಿರಾಸೆ, ವೇದನೆ ಮತ್ತು ಅಸಹಾಯಕತೆಗೆ ಒಳಗಾಗಿದ್ದಾರೆ. ಹೀಗಿರುವಾಗ, ಅವರ ಆಕ್ರೋಶ ಮತ್ತು ಪ್ರಶ್ನೆಗಳನ್ನು ಆಲಿಸುವ ಬದಲು, ಅವರ ಮೇಲೆ ಲಾಠಿ ಪ್ರಹಾರ ನಡೆಸುವುದು, ಪೆಲೆಟ್ ಗನ್‌ಗಳನ್ನು ಬಳಸುವುದು ಹಾಗೂ ಪೊಲೀಸ್ ದೌರ್ಜನ್ಯ ಎಸಗುವುದು ಎಷ್ಟರ ಮಟ್ಟಿಗೆ ಸರಿ? ಈ ರೀತಿಯ ವ್ಯವಸ್ಥೆಗೆ ಮೊದಲು ಸರ್ಕಾರವೇ ಹೊಣೆ ಹೊರಬೇಕು ಎಂದು ಪ್ರಕಾಶ್ ರಾಜ್ ಖಾರವಾಗಿ ಧ್ವನಿ ಎತ್ತಿದ್ದಾರೆ.

ಒಬ್ಬನಿಗೆ ನೋವಾದರೆ ಇಡೀ ಕುಟುಂಬ ನಲುಗುತ್ತೆ: ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ

ವಿದ್ಯಾರ್ಥಿಗಳನ್ನು ಅಥವಾ ಯುವಜನರನ್ನು ಸರ್ಕಾರ ಗುರಿಯಾಗಿಸಿಕೊಂಡು ಕೇಸ್ ಜಡಿಯುತ್ತಿದ್ದರೆ, ಅದು ಕೇವಲ ಆ ಒಬ್ಬ ವ್ಯಕ್ತಿಗೆ ತಲುಪುವ ನೋವಲ್ಲ. ಆ ಮಗುವಿಗೆ ನೋವಾದರೆ ಆತನನ್ನು ಸಾಕಿ ಬೆಳೆಸಿದ ತಂದೆ-ತಾಯಿ, ಅಕ್ಕ-ಪಕ್ಕದಲ್ಲಿದ್ದ ಒಡಹುಟ್ಟಿದವರು, ಬಂಧು-ಬಳಗ ಹಾಗೂ ಇಡೀ ಸಮಾಜವೇ ನೋವನ್ನು ಅನುಭವಿಸುತ್ತದೆ. ಪ್ರತಿಯೊಬ್ಬರ ಭಾವನೆಗಳ ಜೊತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಎಂದು ವಿನಂತಿಸಿರುವ ನಟ, ಮಕ್ಕಳ ಭವಿಷ್ಯ ಮತ್ತು ವೃತ್ತಿಜೀವನವನ್ನು ಇಂತಹ ಪ್ರಕರಣಗಳಿಂದ ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇಂದು ರಾಜೀನಾಮೆ ಕೇಳ್ತಿದ್ದಾರೆ, ನಾಳೆ ಅಧಿಕಾರದಿಂದಲೇ ಕೆಳಗಿಳಿಸ್ತಾರೆ

ವಿಡಿಯೋದ ಕೊನೆಯಲ್ಲಿ ಪ್ರಧಾನಿ ಮೋದಿಯವರಿಗೆ ಅತ್ಯಂತ ಖಡಕ್ ಎಚ್ಚರಿಕೆಯೊಂದನ್ನು ಪ್ರಕಾಶ್ ರಾಜ್ ರವಾನಿಸಿದ್ದಾರೆ. ನನ್ನ ಮಿತ್ರನೇ, ನೆನಪಿರಲಿ… ಇವತ್ತು ದೇಶದ ವಿದ್ಯಾರ್ಥಿಗಳು ಹಾಗೂ ಯುವಜನರು ಕೇವಲ ನಿಮ್ಮ ಹೊಣೆಗಾರಿಕೆ ಮತ್ತು ರಾಜೀನಾಮೆ ಮಾತ್ರ ಕೇಳುತ್ತಿದ್ದಾರೆ. ಆದರೆ, ನೀವು ಹೀಗೆಯೇ ಮಕ್ಕಳನ್ನು ಪೀಡಿಸುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಮಕ್ಕಳು, ಪೋಷಕರು ಹಾಗೂ ಇಡೀ ಸಮಾಜವೇ ಒಂದಾಗಿ ನಿಮ್ಮನ್ನು ಅಧಿಕಾರದಿಂದಲೇ ಕೆಳಗಿಳಿಸುವ ಕಾಲ ದೂರವಿಲ್ಲ. ಅಧಿಕಾರವನ್ನು ನೀಡಿದ ಜನರಿಗೆ ಅದನ್ನು ಕಸಿದುಕೊಳ್ಳುವ ಶಕ್ತಿಯೂ ಇದೆ ಎಂದು ಎಚ್ಚರಿಸಿದ್ದಾರೆ.

ಯುವಜನರ ಪರವಾಗಿ ದಯೆ ತೋರಿ: ಜಾಲತಾಣಗಳಲ್ಲಿ ಜೋರಾದ ಪರ-ವಿರೋಧ ಚರ್ಚೆ

ಮಕ್ಕಳ ವಿಷಯದಲ್ಲಿ ಸರ್ಕಾರ ದಯೆ ತೋರಬೇಕು, ಅವರಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕು ಹೊರತು ಅವರ ಜೀವನವನ್ನು ಕಾನೂನಿನ ಸುಳಿಯಲ್ಲಿ ಸಿಲುಕಿಸಬಾರದು ಎಂಬುದು ಪ್ರಕಾಶ್ ರಾಜ್ ಅವರ ಪ್ರತಿಪಾದನೆ. ಪ್ರಕಾಶ್ ರಾಜ್ ಅವರ ಈ ವಿಡಿಯೋ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ಕೆಲವರು ಪ್ರಕಾಶ್ ರಾಜ್ ಅವರ ನಿಲುವನ್ನು ಬೆಂಬಲಿಸಿ ಯುವಜನರಿಗೆ ತಿದ್ದಿಕೊಳ್ಳುವ ಅವಕಾಶವಿರಬೇಕು ಎನ್ನುತ್ತಿದ್ದರೆ, ಇನ್ನೊಂದೆಡೆ ಕಾನೂನು ಎಲ್ಲರಿಗೂ ಒಂದೇ ಎಂಬ ವಿರೋಧದ ಧ್ವನಿಗಳೂ ಕೇಳಿಬರುತ್ತಿವೆ.

- Advertisement -spot_img

More articles

- Advertisement -spot_img

Latest article