No menu items!
19.6 C
Munich
Sunday, August 9, 2026

ರೇಣುಕಾಸ್ವಾಮಿ ಕೊಲೆ ಕೇಸ್: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದರ್ಶನ್ ಬೆದರಿಕೆ ಹಾಕಿದ್ದರು – ಪ್ರದೋಷ್ ಗಂಭೀರ ಆರೋಪ

Must read

ರೇಣುಕಾಸ್ವಾಮಿ ಕೊಲೆ ಕೇಸ್: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದರ್ಶನ್ ಬೆದರಿಕೆ ಹಾಕಿದ್ದರು – ಪ್ರದೋಷ್ ಗಂಭೀರ ಆರೋಪ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A-14 ಆರೋಪಿ ಪ್ರದೋಷ್ ಅವರು ಕ್ಷಮಾದಾನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ A-2 ಆರೋಪಿ ದರ್ಶನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರದೋಷ್ ಅವರ ಅರ್ಜಿಯಲ್ಲಿ, ರೇಣುಕಾಸ್ವಾಮಿಯನ್ನು ಹಲ್ಲೆ ನಡೆಸಿದ ಸ್ಥಳಕ್ಕೆ ದರ್ಶನ್ ಅವರೇ ನಿರ್ದೇಶನ ನೀಡಿದ್ದರು ಎಂದು ಆರೋಪಿಸಲಾಗಿದೆ. ರೇಣುಕಾಸ್ವಾಮಿಗೆ ದರ್ಶನ್ ನಿಂದಿಸಿ, ಕಪಾಳಕ್ಕೆ ಹೊಡೆದು ಬಳಿಕವೂ ಹಲ್ಲೆ ಮುಂದುವರಿಸಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪವಿತ್ರಾ ಗೌಡ ಅವರಿಗೂ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಯುವಂತೆ ದರ್ಶನ್ ಸೂಚಿಸಿದ್ದರು ಎಂಬ ಆರೋಪವನ್ನು ಪ್ರದೋಷ್ ಮಾಡಿದ್ದಾರೆ. ರೇಣುಕಾಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದರೂ ದರ್ಶನ್ ಒದೆಯುವುದನ್ನು ನಿಲ್ಲಿಸಿರಲಿಲ್ಲ. ಅಲ್ಲದೆ, ದರ್ಶನ್ ರೇಣುಕಾಸ್ವಾಮಿ ಎದೆ ಮೇಲೆ ನಿಂತು ಸಿಗರೇಟ್‌ನಿಂದ ಸುಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದನ್ನು ತಡೆಯಲು ತಾನು ದರ್ಶನ್ ಕಾಲನ್ನು ದೂರ ಸರಿಸಿದ್ದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಮೃತಪಟ್ಟ ವಿಚಾರ ತಿಳಿದ ಬಳಿಕ ದರ್ಶನ್ ತಮ್ಮ ಗನ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು ಎಂದು ಪ್ರದೋಷ್ ಆರೋಪಿಸಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ದರ್ಶನ್ ಭಾಗಿಯಾಗಿದ್ದರು. ನಾಗರಾಜ್‌ಗೆ ₹5 ಲಕ್ಷ ಹಾಗೂ ವಿನಯ್‌ಗೆ ₹10 ಲಕ್ಷ ನೀಡುವ ವ್ಯವಸ್ಥೆ ಮಾಡಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮೃತದೇಹವನ್ನು ಸ್ಥಳಾಂತರಿಸಿ, ಘಟನೆ ಬೇರೆಡೆ ನಡೆದಂತೆ ಸುಳ್ಳು ಕಥೆ ಸೃಷ್ಟಿಸಿ ಪೊಲೀಸರಿಗೆ ಹೇಳಿಕೆ ನೀಡುವಂತೆ ಸೂಚಿಸಲಾಗಿತ್ತು ಎಂದು ಪ್ರದೋಷ್ ಆರೋಪಿಸಿದ್ದಾರೆ.
ತಾನು ಕೊಲೆಯಲ್ಲಿ ಭಾಗಿಯಾಗುವ ಯಾವುದೇ ಉದ್ದೇಶ ಹೊಂದಿರಲಿಲ್ಲ ಎಂದು ಪ್ರದೋಷ್ ಅರ್ಜಿಯಲ್ಲಿ ಹೇಳಿದ್ದಾರೆ. ಆರಂಭದಲ್ಲಿ ಹಲ್ಲೆ ತಡೆಯಲು ಪ್ರಯತ್ನಿಸಿದ್ದೆ, ರೇಣುಕಾಸ್ವಾಮಿಗೆ ಆಹಾರ, ನೀರು ಮತ್ತು ಬಟ್ಟೆ ವ್ಯವಸ್ಥೆ ಮಾಡಿದ್ದೆ ಎಂದು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಮೃತಪಟ್ಟ ವಿಚಾರ ತಿಳಿದು ತಾನು ಭಯಗೊಂಡಿದ್ದೆ. ದರ್ಶನ್ ಅವರ ಒತ್ತಡ ಮತ್ತು ಬೆದರಿಕೆಯಿಂದಾಗಿ ನಂತರದ ಬೆಳವಣಿಗೆಗಳಲ್ಲಿ ಭಾಗಿಯಾಗಬೇಕಾಯಿತು ಎಂದು ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧನಿದ್ದೇನೆ. ಹೀಗಾಗಿ ತನಗೆ ಕ್ಷಮಾದಾನ ನೀಡಿ ಅಪ್ರೂವರ್ ಆಗಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಪ್ರದೋಷ್ ಕೋರಿದ್ದಾರೆ.
ಗಮನಿಸಿ: ಮೇಲಿನ ಆರೋಪಗಳು ಪ್ರದೋಷ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿರುವ ಆರೋಪಗಳಾಗಿದ್ದು, ಅವುಗಳ ಸತ್ಯಾಸತ್ಯತೆ ನ್ಯಾಯಾಲಯದ ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ.

- Advertisement -spot_img

More articles

- Advertisement -spot_img

Latest article