ಜನರ ಸಮಸ್ಯೆಗಳಿಗೆ ಸ್ಪಂದಿಸಿ, ರಾಜ್ಯದ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಿ; ಸರ್ಕಾರಿ ನೌಕರರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರಿಗೆ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ. ನಾನು ಸೇರಿದಂತೆ ನನ್ನ ಸಚಿವ ಸಂಪುಟದ ಸದಸ್ಯರು, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರೇ. ನಮ್ಮದು ‘ಟೀಮ್ ಕರ್ನಾಟಕ’. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಕಲ್ಯಾಣಕ್ಕೆ ಶ್ರಮಿಸಬೇಕು ಎಂದು ಸಿಎಂ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ನಡೆದ ಸರ್ಕಾರಿ ನೌಕರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ ಎಂದು ಹೇಳಿದರು.
ನಮಗೆ ಸಿಕ್ಕಿರುವ ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಲ್ಲಿಯವರೆಗೆ ರಾಜ್ಯವನ್ನು ಮುನ್ನಡೆಸಿದ ಪ್ರತಿಯೊಬ್ಬ ಮುಖ್ಯಮಂತ್ರಿಯೂ ತಮ್ಮದೇ ಆದ ರೀತಿಯಲ್ಲಿ ಹಾಗೂ ತಮ್ಮ ಅನುಭವ ಮತ್ತು ಸಿದ್ಧಾಂತದ ಆಧಾರದಲ್ಲಿ ಆಡಳಿತ ನಡೆಸಿದ್ದಾರೆ ಎಂದರು.
ವಿಧಾನಸೌಧ ನಿರ್ಮಾಣದ ಸಂದರ್ಭವನ್ನು ಉಲ್ಲೇಖಿಸಿದ ಸಿಎಂ, ಕೆಂಗಲ್ ಹನುಮಂತಯ್ಯ ಅವರು ಜೈಲಿನ ಖೈದಿಗಳಿಂದ ವಿಧಾನಸೌಧ ಕಟ್ಟಿಸಿದ್ದರು. ಆ ಸಂದರ್ಭದಲ್ಲಿ ಕೆಲ ಖೈದಿಗಳು ಅವರ ಮೇಲೆ ಚಪ್ಪಲಿ ಎಸೆದಿದ್ದರು. ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರು ಕೇವಲ ಒಂದು ರೂಪಾಯಿ ಸಂಭಾವನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸವೂ ಇದೆ ಎಂದು ಹೇಳಿದರು.
ಹಿಂದಿನವರ ಕೆಲಸಗಳನ್ನು ತಾನು ಟೀಕಿಸುವುದಿಲ್ಲ. ‘ಟೀಕೆಗಳು ಸಾಯುತ್ತವೆ, ಆದರೆ ನಮ್ಮ ಕೆಲಸಗಳು ಉಳಿಯುತ್ತವೆ’ ಎಂದು ಶಿವಕುಮಾರ್ ಹೇಳಿದರು.
‘ಇತಿಹಾಸ ಓದುವುದಲ್ಲ, ಇತಿಹಾಸ ಸೃಷ್ಟಿಸಬೇಕು’
ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿದ ಸಿಎಂ, ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೆನಪಿಸಿದರು.
ಸರ್ಕಾರಿ ನೌಕರರು ಸಾಕಷ್ಟು ವಿದ್ಯೆ, ಜ್ಞಾನ ಹಾಗೂ ಅನುಭವ ಹೊಂದಿದ್ದಾರೆ. ತಾನು ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲವಾದರೂ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಶಾಸಕನಾಗಿ, ಸಚಿವನಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ ಎಂದು ಹೇಳಿದರು.
ಸರ್ಕಾರಿ ನೌಕರರು ಶ್ರಮಜೀವಿಗಳಾಗಿದ್ದು, ಸರ್ಕಾರದ ನಾಡಿಮಿಡಿತವನ್ನು ಅರಿತುಕೊಂಡು ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಯಾವ ರೀತಿಯ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗುತ್ತೇವೆ ಎಂಬುದು ಅತ್ಯಂತ ಮುಖ್ಯ. ನಮ್ಮಿಂದ ಜನರ ಬದುಕಿನಲ್ಲಿ ಬದಲಾವಣೆ ತರಲು ಸಾಧ್ಯವಾಗಬೇಕು ಎಂದು ಸಿಎಂ ಕರೆ ನೀಡಿದರು.
‘ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ’
ನಮ್ಮ ಮೇಲೆ ಹಾಗೂ ಸರ್ಕಾರಿ ನೌಕರರ ಮೇಲೆ ಜನರ ಬದುಕಿನಲ್ಲಿ ಬದಲಾವಣೆ ತರುವ ದೊಡ್ಡ ಜವಾಬ್ದಾರಿ ಇದೆ. ತಾನು ಇತಿಹಾಸವನ್ನು ಓದಲು ಅಥವಾ ಬರೆಯಲು ಬಯಸುವುದಿಲ್ಲ. ಬದಲಿಗೆ ಇತಿಹಾಸ ಸೃಷ್ಟಿಸಲು ಬಯಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸರ್ಕಾರಿ ನೌಕರರ ಸೇವೆ ಮತ್ತು ಕೊಡುಗೆಯಿಂದಲೇ ಕರ್ನಾಟಕ ಇಂದು ಈ ಹಂತಕ್ಕೆ ಬೆಳೆದಿದೆ. ಹೀಗಾಗಿ ಸಚಿವರು, ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.



