ಮೊಬೈಲ್, ಪೆನ್ಡ್ರೈವ್ ಪತ್ತೆ ಬಳಿಕ ಪ್ರಜ್ವಲ್ ರೇವಣ್ಣನಿಗೆ ಶಾಕ್; ವಿಐಪಿ ಸೆಲ್ನಿಂದ ಸಾಮಾನ್ಯ ಕೈದಿಗಳ ಬ್ಯಾರಕ್ಗೆ ಶಿಫ್ಟ್
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ತಪಾಸಣೆ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್ನಲ್ಲಿ ಮೊಬೈಲ್ ಫೋನ್ ಹಾಗೂ ಪೆನ್ಡ್ರೈವ್ ಪತ್ತೆಯಾಗಿರುವುದು ಕಾರಾಗೃಹ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.
ತಪಾಸಣೆ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಸೆಲ್ನಲ್ಲಿ ನೀಲಿ ಬಣ್ಣದ ರೆಡ್ಮಿ 5G ಮೊಬೈಲ್, ಚಾರ್ಜರ್, ನೀಲಿ ಬಣ್ಣದ ಪಾಕೆಟ್ ನೋಟ್ಬುಕ್ ಹಾಗೂ ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್ಡ್ರೈವ್ ಪತ್ತೆಯಾಗಿದೆ. ಜಪ್ತಿ ಮಾಡಲಾದ ಮೊಬೈಲ್ ಮತ್ತು ಪೆನ್ಡ್ರೈವ್ ಪರಿಶೀಲನೆ ವೇಳೆ ಅಶ್ಲೀಲ ವಿಡಿಯೋಗಳು ಹಾಗೂ ಯುವತಿಯರ ಫೋಟೋಗಳ ಕಟಿಂಗ್ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಜೈಲಿನೊಳಗೆ ಮೊಬೈಲ್ ಹಾಗೂ ಪೆನ್ಡ್ರೈವ್ನಂತಹ ನಿಷೇಧಿತ ವಸ್ತುಗಳು ಹೇಗೆ ತಲುಪಿದವು ಎಂಬುದು ಇದೀಗ ತನಿಖೆಯ ಪ್ರಮುಖ ಅಂಶವಾಗಿದೆ. ಈ ವಸ್ತುಗಳನ್ನು ಪ್ರಜ್ವಲ್ ರೇವಣ್ಣ ಅವರಿಗೆ ಯಾರು ನೀಡಿದರು ಹಾಗೂ ಪೆನ್ಡ್ರೈವ್ನಲ್ಲಿ ಅಶ್ಲೀಲ ವಿಡಿಯೋಗಳು ಹೇಗೆ ಬಂದವು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೊಬೈಲ್ ಪತ್ತೆಯಾದ ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ವಿಐಪಿ ಸೆಲ್ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್ಗೆ ಸ್ಥಳಾಂತರಿಸಲಾಗಿದೆ. ಈ ಹಿಂದೆ ಪ್ರಜ್ವಲ್ ರೇವಣ್ಣ ಹಾಗೂ ಪೋಕೋ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರತಾಪ್ ರಾಯ್ ಒಂದೇ ಸೆಲ್ನಲ್ಲಿದ್ದರು ಎನ್ನಲಾಗಿದೆ.
ಇದೀಗ ಪ್ರಜ್ವಲ್ ರೇವಣ್ಣ ಅವರನ್ನು ಸುಮಾರು 20 ಕೈದಿಗಳಿರುವ ಸೆಲ್ಗೆ ಸ್ಥಳಾಂತರಿಸಲಾಗಿದ್ದು, ಸಾಮಾನ್ಯ ಕೈದಿಗಳೊಂದಿಗೆ ಒಂದೇ ಶೌಚಾಲಯ ಬಳಸಬೇಕಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಜೈಲು ನಿಯಮದಂತೆ ಸಮವಸ್ತ್ರ ಧರಿಸಿ ಲೈಬ್ರರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ.
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲು ಎಸ್ಪಿ ಅನ್ಶುಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿ, ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ.
ಕಳೆದ 6ರಂದು ಜೈಲು ಅಧಿಕಾರಿಗಳು ನಡೆಸಿದ್ದ ತಪಾಸಣೆಯಲ್ಲಿ ಮೊಬೈಲ್ ಪತ್ತೆಯಾಗಿರಲಿಲ್ಲ. ಇದೀಗ ಅದೇ ಸೆಲ್ನಲ್ಲಿ ಮೊಬೈಲ್ ಸಿಕ್ಕಿರುವುದರಿಂದ ಜೈಲಿನೊಳಗೆ ಅದು ಹೇಗೆ ತಲುಪಿತು, ಯಾರು ನೀಡಿದರು ಹಾಗೂ ಇದರಲ್ಲಿ ಸಿಬ್ಬಂದಿಯ ಪಾತ್ರವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ.



