No menu items!
28.9 C
Munich
Wednesday, August 19, 2026

ಹನೂರು ಶೂಟೌಟ್: ತನಿಖೆ ಬಳಿಕವಷ್ಟೇ ಪ್ರತಿಕ್ರಿಯೆ ಎಂದ ಸಿಎಂ ಶಿವಕುಮಾರ್

Must read

ಹನೂರು ಶೂಟೌಟ್: ತನಿಖೆ ಬಳಿಕವಷ್ಟೇ ಪ್ರತಿಕ್ರಿಯೆ ಎಂದ ಸಿಎಂ ಶಿವಕುಮಾರ್

ಬೆಂಗಳೂರು: ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕವಷ್ಟೇ ಪ್ರತಿಕ್ರಿಯೆ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಜಿಲೆಟಿನ್ ಬಳಸಿ ಸ್ಫೋಟಿಸಲಾಗಿದ್ದು, ತಮಿಳುನಾಡು ಮೂಲದವರ ಕೈವಾಡದ ಶಂಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ತಮಗೂ ಕೆಲ ಮಾಹಿತಿ ಬರುತ್ತಿದೆ ಎಂದರು. ಅರಣ್ಯ ಸಚಿವರು ತನಿಖೆ ಮಾಡಿಸುತ್ತಿದ್ದು, ಈಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ವರದಿ ಬಂದ ಬಳಿಕ ಮಾಹಿತಿ ನೀಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಕಾವೇರಿ ವನ್ಯಜೀವಿ ವಿಭಾಗದ ಹನೂರು ಉಪ ವಿಭಾಗ ವ್ಯಾಪ್ತಿಯ ಹನೂರು ವನ್ಯಜೀವಿ ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿ ಕಳ್ಳಬೇಟೆ ಸಂಬಂಧ ಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಬಗ್ಗೆ ಆಗಸ್ಟ್ 14ರ ಅಂದಾಜು ರಾತ್ರಿ 8 ಗಂಟೆಗೆ ಇಲಾಖಾ ಸಿಬ್ಬಂದಿಗಳಿಗೆ ಮಾಹಿತಿ ದೊರೆತಿತ್ತು. ಆ ಮಾಹಿತಿಯ ಮೇರೆಗೆ ಅರಣ್ಯ ಸಿಬ್ಬಂದಿಗಳು ಕೂಡಲೇ ಎರಡು ತಂಡಗಳಾಗಿ ಹನೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಅರಣ್ಯ ಪ್ರದೇಶದ ಸುತ್ತಮುತ್ತ ಕಾರ್ಯಾಚರಣೆ ಆರಂಭಿಸಿದ್ದರು.
ಅರಣ್ಯ ಪ್ರದೇಶದಲ್ಲಿ ಟಾರ್ಚ್ ಬೆಳಕು ಕಂಡುಬಂದಿದ್ದರಿಂದ, ಆ ಪ್ರದೇಶ ಸ್ಪಷ್ಟವಾಗಿ ಕಾಣುವಂತಹ ಕರಡಿಕಲ್ಲು ಒಡ್ಡು ಎತ್ತರದ ಅರಣ್ಯ ಪ್ರದೇಶದಲ್ಲಿ ವೀಕ್ಷಿಸುವ ಸಲುವಾಗಿ ಬೆಳಗಿನಜಾವ ಅಂದಾಜು 5 ಗಂಟೆಗೆ ಸಿಬ್ಬಂದಿಗಳು ತೆರಳಿದ್ದರು. ಕರಡಿಕಲ್ಲು ಒಡ್ಡು ಅರಣ್ಯ ಪ್ರದೇಶದಲ್ಲಿ ಕಲ್ಲುಬಂಡೆಗಳು ಮತ್ತು ಪೊದೆಯ ಮರೆಯಲ್ಲಿ ಅವಿತಿದ್ದ ಬೇಟೆಗಾರರು ಅರಣ್ಯ ಸಿಬ್ಬಂದಿಗಳನ್ನು ಕಂಡು ಅಕ್ರಮ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ್ದು, ಮೂವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

- Advertisement -spot_img

More articles

- Advertisement -spot_img

Latest article