ದಾವಣಗೆರೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರ ದುರ್ಮರಣ
ದಾವಣಗೆರೆ: ತಾಲೂಕಿನ ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕರೆಕಟ್ಟೆ ಗ್ರಾಮದ ಯೂಸುಫ್ ಖಾನ್ (33) ಹಾಗೂ ಹೊಸ ಬೆಳವನೂರು ಗ್ರಾಮದ ಅಣ್ಣಪ್ಪ (43) ಎಂದು ಗುರುತಿಸಲಾಗಿದೆ.
ಯೂಸುಫ್ ಖಾನ್ ಅವರು ದಾವಣಗೆರೆ ಕಡೆಯಿಂದ ಬೈಕ್ನಲ್ಲಿ ಬರುತ್ತಿದ್ದರು. ಇದೇ ವೇಳೆ ಅಣ್ಣಪ್ಪ ಅವರು ಚನ್ನಗಿರಿ ಕಡೆಯಿಂದ ಬೈಕ್ನಲ್ಲಿ ತೆರಳುತ್ತಿದ್ದರು. ಕೈದಾಳೆ-ಕುಕ್ಕುವಾಡ ಕ್ರಾಸ್ ಬಳಿ ಎರಡು ಬೈಕ್ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಯೂಸುಫ್ ಖಾನ್ ಅವರ ಮಗು ಅನಾರೋಗ್ಯದಿಂದ ಬಳಲುತ್ತಿತ್ತು ಎನ್ನಲಾಗಿದೆ. ಮಗುವಿಗೆ ಔಷಧಿ ತರಲು ಅವರು ಬೈಕ್ನಲ್ಲಿ ದಾವಣಗೆರೆಗೆ ತೆರಳಿದ್ದರು. ಔಷಧಿ ಪಡೆದುಕೊಂಡು ವಾಪಸ್ ಬರುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಅಣ್ಣಪ್ಪ ಅವರ ಬೈಕ್ಗೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



