ಚಾರಣಿಗರ ಸುರಕ್ಷತೆಗೆ ಹೊಸ SOP: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ʼಗೆ ಕಟ್ಟುನಿಟ್ಟಿನ ನಿಯಮ
ಬೆಂಗಳೂರು: ಚಾರಣಿಗರ ಸುರಕ್ಷತೆ ಹಾಗೂ ಪರಿಸರ ಸೂಕ್ಷ್ಮತೆಯನ್ನು ಕಾಪಾಡುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣ ಮತ್ತು ಇಕೋ-ಟ್ರೇಲ್ ಚಟುವಟಿಕೆಗಳನ್ನು ನಿಯಂತ್ರಿಸಲು ಸಮಗ್ರ ಮಾದರಿ ಕಾರ್ಯಾಚರಣೆ ವಿಧಾನ (SOP) ಜಾರಿಗೆ ತಂದಿದೆ.
ಕರ್ನಾಟಕದ ಪಶ್ಚಿಮ ಘಟ್ಟಗಳು ಹಾಗೂ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸುಮಾರು 39 ಸಂಭಾವ್ಯ ಚಾರಣ ಮಾರ್ಗಗಳು ಗುರುತಿಸಲ್ಪಟ್ಟಿವೆ. ಆದರೆ, 2026ರಲ್ಲಿ ನಡೆದ ಕೆಲವು ಘಟನೆಗಳು ಅರಣ್ಯ ಪ್ರದೇಶಗಳಲ್ಲಿ ಚಾರಣದ ವೇಳೆ ಎದುರಾಗಬಹುದಾದ ಅಪಾಯಗಳ ಕುರಿತು ಎಚ್ಚರಿಕೆ ಮೂಡಿಸಿವೆ.
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಚಿರತೆ ದಾಳಿ, ಕೊಡಗಿನ ತಡಿಯಂಡಮೋಲ್ನಲ್ಲಿ ನಾಪತ್ತೆಯಾಗಿದ್ದ ಚಾರಣಿಗನ ರಕ್ಷಣಾ ಕಾರ್ಯಾಚರಣೆ ಹಾಗೂ ಚಿಕ್ಕಮಗಳೂರಿನ ಬಂಡಾಜೆ ಜಲಪಾತದ ಬಳಿ ನಡೆದ ಘಟನೆಗಳು ದಟ್ಟ ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವಾಗ ಎದುರಾಗುವ ಅಪಾಯಗಳನ್ನು ಎತ್ತಿಹಿಡಿದಿವೆ. ಹವಾಮಾನ ವೈಪರೀತ್ಯ, ಮೊಬೈಲ್ ನೆಟ್ವರ್ಕ್ ಕೊರತೆ, ಕಠಿಣ ಭೂಪ್ರದೇಶ ಹಾಗೂ ವನ್ಯಜೀವಿಗಳ ಸಂಚಾರವೂ ಚಾರಣಿಗರ ಸುರಕ್ಷತೆಗೆ ಸವಾಲಾಗಿವೆ.
ಈ ಹಿನ್ನೆಲೆಯಲ್ಲಿ ಅರಣ್ಯ ಪ್ರವೇಶದ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೆ ತರಲಾಗಿದ್ದು, ಯಾವುದೇ ಚಾರಣ ಮಾರ್ಗವನ್ನು ಸಾರ್ವಜನಿಕರಿಗೆ ತೆರೆಯುವ ಮೊದಲು ಅದರ ಸುರಕ್ಷತೆ ಮತ್ತು ಪರಿಸರ ಸೂಕ್ಷ್ಮತೆಯ ಸಮಗ್ರ ಮೌಲ್ಯಮಾಪನ ಕಡ್ಡಾಯ ಮಾಡಲಾಗಿದೆ.
ಹೊಸ SOPಯ ಪ್ರಮುಖ ನಿಯಮಗಳು
ಪ್ರವೇಶ ಸಾಮರ್ಥ್ಯದ ನಿಯಂತ್ರಣ:
ಚಾರಣ ಮಾರ್ಗಗಳಲ್ಲಿ ಅತಿಯಾದ ಜನಸಂದಣಿಯನ್ನು ತಡೆಯಲು ದಿನನಿತ್ಯದ ಪ್ರವೇಶ ಮಿತಿಯನ್ನು ನಿಗದಿಪಡಿಸಲಾಗುತ್ತದೆ. ಇದರಿಂದ ಅರಣ್ಯ ಸಿಬ್ಬಂದಿಗೆ ಪ್ರತಿ ಚಾರಣಿಗರ ಗುಂಪಿನ ಮೇಲೆ ಪರಿಣಾಮಕಾರಿಯಾಗಿ ನಿಗಾ ವಹಿಸಲು ಸಾಧ್ಯವಾಗಲಿದೆ.
ತರಬೇತಿ ಪಡೆದ ಪ್ರಕೃತಿ ಮಾರ್ಗದರ್ಶಿಗಳು:
ಜೀವವೈವಿಧ್ಯ, ದಾರಿ ಗುರುತಿಸುವಿಕೆ, ಚಾರಣಿಗರ ಎಣಿಕೆ ಹಾಗೂ ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ತರಬೇತಿ ಪಡೆದ ಸ್ಥಳೀಯ ಯುವಕರನ್ನು ಪ್ರಕೃತಿ ಮಾರ್ಗದರ್ಶಿಗಳಾಗಿ ನಿಯೋಜಿಸಲಾಗುತ್ತದೆ.
ತಂತ್ರಜ್ಞಾನ ಆಧಾರಿತ ಸುರಕ್ಷತಾ ಮೇಲ್ವಿಚಾರಣೆ:
ನೆಟ್ವರ್ಕ್ ಲಭ್ಯವಿಲ್ಲದ ಹಾಗೂ ಕಠಿಣ ಭೂಪ್ರದೇಶಗಳಲ್ಲಿ ಚಾರಣಿಗರು ದಾರಿ ತಪ್ಪುವುದನ್ನು ತಡೆಯಲು ಜಿಪಿಎಸ್ ಆಧಾರಿತ ಸಂವಹನ ಸಾಧನಗಳು ಮತ್ತು ಮೊಬೈಲ್ ಟ್ರ್ಯಾಕಿಂಗ್ ವ್ಯವಸ್ಥೆ ಬಳಸಲಾಗುತ್ತದೆ.
ಚಾರಣ ಮೂಲಸೌಕರ್ಯ ಸುಧಾರಣೆ:
ಚಾರಣ ಮಾರ್ಗಗಳಲ್ಲಿ ಸ್ಪಷ್ಟವಾದ ದಾರಿ ಸೂಚಕ ಫಲಕಗಳು, ಕುಡಿಯುವ ನೀರು, ವಿಶ್ರಾಂತಿ ತಾಣಗಳು ಹಾಗೂ ಬೇಸ್ ಕ್ಯಾಂಪ್ಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ.
ವನ್ಯಜೀವಿ ಸಂರಕ್ಷಣಾ ನಿಯಮಗಳು:
ಆನೆ, ಹುಲಿ, ಚಿರತೆ ಅಥವಾ ಕರಡಿಯಂತಹ ವನ್ಯಜೀವಿಗಳ ಸಂಚಾರ ಕಂಡುಬಂದರೆ, ಅಂತಹ ಮಾರ್ಗಗಳಲ್ಲಿ ಚಾರಣ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅಥವಾ ನಿರ್ಬಂಧಿಸುವ ಅಧಿಕಾರ ಅರಣ್ಯ ಇಲಾಖೆಗೆ ಇರಲಿದೆ.
ತ್ವರಿತ ತುರ್ತು ಸ್ಪಂದನೆ:
ಚಾರಣಿಗರು ನಾಪತ್ತೆಯಾಗುವುದು ಅಥವಾ ಅಪಘಾತ ಸಂಭವಿಸುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ, ಪೊಲೀಸರು, ಎಸ್ಡಿಆರ್ಎಫ್ ತಂಡಗಳು, ಡ್ರೋನ್ಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ತಕ್ಷಣ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಕಟ್ಟುನಿಟ್ಟಿನ ನಿಯಮ ಜಾರಿ:
ನಿಗದಿತ ನಿಯಮಗಳನ್ನು ಉಲ್ಲಂಘಿಸುವ ಅಥವಾ ಅನುಮತಿ ಪಡೆದ ಮಾರ್ಗವನ್ನು ಬಿಟ್ಟು ಬೇರೆಡೆ ತೆರಳುವ ಚಾರಣಿಗರು ಮತ್ತು ಮಾರ್ಗದರ್ಶಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯವಿದ್ದಲ್ಲಿ ಅವರನ್ನು ಕಪ್ಪುಪಟ್ಟಿಗೆ (ಬ್ಲ್ಯಾಕ್ಲಿಸ್ಟ್) ಸೇರಿಸುವ ಅವಕಾಶವೂ ಇದೆ.
ಅರಣ್ಯ ಇಲಾಖೆಯ ಪ್ರಕಾರ, ಅರಣ್ಯದಲ್ಲಿನ ಚಾರಣ ಮಾರ್ಗಗಳು ಸಾಮಾನ್ಯ ಪ್ರವಾಸಿ ರಸ್ತೆಗಳಲ್ಲ. ಅವು ಸೂಕ್ಷ್ಮ ವನ್ಯಜೀವಿ ಆವಾಸಸ್ಥಾನಗಳಾಗಿದ್ದು, ಸುರಕ್ಷತೆ ಹಾಗೂ ಪರಿಸರದ ಹಿತದೃಷ್ಟಿಯಿಂದ ಹಂತ ಹಂತವಾಗಿ ಸಿದ್ಧತೆ ಮತ್ತು ಮೌಲ್ಯಮಾಪನ ನಡೆಸಿದ ಬಳಿಕವೇ ಸಾರ್ವಜನಿಕರಿಗೆ ತೆರೆಯಲಾಗುತ್ತದೆ.
ಹೊಸ ಮಾರ್ಗಸೂಚಿಗಳ ಮೂಲಕ ವನ್ಯಜೀವಿ ಸಂರಕ್ಷಣೆ ಮತ್ತು ಮಾನವ ಜೀವ ರಕ್ಷಣೆಗೆ ಆದ್ಯತೆ ನೀಡುವುದರ ಜೊತೆಗೆ, ಜವಾಬ್ದಾರಿಯುತ ಚಾರಣಿಗರಿಗೆ ಸುರಕ್ಷಿತ ಹಾಗೂ ಸುಸ್ಥಿರ ಅನುಭವ ಒದಗಿಸುವುದು ಇಲಾಖೆಯ ಪ್ರಮುಖ ಉದ್ದೇಶವಾಗಿದೆ.



