ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ: ಆರೋಪಿಗಳ ಕುಟುಂಬಸ್ಥರ ಮನವಿಗೂ ಒಪ್ಪದ ನಟಿ ರಮ್ಯಾ
ಬೆಂಗಳೂರು: ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಹಾಗೂ ಕಾಮೆಂಟ್ಗಳನ್ನು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕುಟುಂಬಸ್ಥರು ಪ್ರಕರಣವನ್ನು ವಾಪಸ್ ಪಡೆಯುವಂತೆ ರಮ್ಯಾ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಪ್ರಕರಣವನ್ನು ಹಿಂಪಡೆಯುವುದಿಲ್ಲ ಎಂದು ನಟಿ ರಮ್ಯಾ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಕುಟುಂಬಸ್ಥರು ರಮ್ಯಾ ಅವರಲ್ಲಿ ಕ್ಷಮೆ ಕೋರಿ, ಈ ಬಾರಿ ತಪ್ಪಾಗಿದೆ. ದಯವಿಟ್ಟು ಪ್ರಕರಣವನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ಈ ಪ್ರಕರಣ ಒಂದು ಪಾಠವಾಗಬೇಕು. ಯಾವುದೇ ಕಾರಣಕ್ಕೂ ಕೇಸ್ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ಬಳಸಿ ಯಾರ ಬಗ್ಗೆಯಾದರೂ ಮನಬಂದಂತೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಸರಿಯಲ್ಲ. ಒಬ್ಬ ಹೆಣ್ಣುಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೊದಲು ಸಾವಿರ ಬಾರಿ ಯೋಚಿಸುವಂತಾಗಬೇಕು. ಈ ಪ್ರಕರಣ ಎಲ್ಲರಿಗೂ ಒಂದು ಪಾಠವಾಗಬೇಕು ಎಂದು ರಮ್ಯಾ ಹೇಳಿದ್ದಾರೆ ಎನ್ನಲಾಗಿದೆ.
ಪ್ರಕರಣದಲ್ಲಿ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ನೀಡಲು ಸಿದ್ಧವಿದ್ದೇನೆ. ಆದರೆ, ಆರೋಪಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ 6ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಆರೋಪಿಗಳ ಕುಟುಂಬಸ್ಥರು ಪ್ರಕರಣ ಹಿಂಪಡೆಯುವಂತೆ ಮನವಿ ಮಾಡಿರುವ ಬೆಳವಣಿಗೆ ನಡೆದಿದೆ.



