ನೇಪಾಳದಂತೆ ದಕ್ಷಿಣ ಭಾರತದಲ್ಲೂ ಭೀಕರ ಪ್ರವಾಹ’; ಸಮುದ್ರಗಳು ನುಗ್ಗಿ ಊರುಗಳು ಮುಳುಗುತ್ತೆ: ಕೋಡಿಶ್ರೀ ಭವಿಷ್ಯ
ಹಾಸನ: ನೇಪಾಳದಲ್ಲಿ ಸಂಭವಿಸಿದಂತಹ ಭೀಕರ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಘಟನೆಗಳು ದಕ್ಷಿಣ ಭಾರತದಲ್ಲೂ ನಡೆಯುವ ಸಾಧ್ಯತೆ ಇದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (ಕೋಡಿಶ್ರೀ) ಭವಿಷ್ಯ ನುಡಿದಿದ್ದಾರೆ. ಸಮುದ್ರಗಳು ನುಗ್ಗಿ ಊರುಗಳು ಮುಳುಗುವಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಶ್ರೀ, ಈ ವರ್ಷದ ಪರಿಸ್ಥಿತಿ ಕುರಿತು ತಾವು ಈ ಹಿಂದೆಯೇ ಭವಿಷ್ಯ ನುಡಿದಿದ್ದಾಗಿ ತಿಳಿಸಿದ್ದಾರೆ. ಮುಂಗಾರು ಮಳೆ ವಿರಳವಾಗಲಿದ್ದು, ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ಜನಜಂಗುಳಿ ಹೆಚ್ಚಾಗಲಿದೆ, ಅನ್ನ, ಆಹಾರ ಮತ್ತು ನೀರಿಗೆ ಕೊರತೆ ಎದುರಾಗಲಿದೆ. ಸಾವು-ನೋವುಗಳು ಹೆಚ್ಚಾಗುವ ಜೊತೆಗೆ ವಿಪರೀತ ಪ್ರವಾಹ ಸಂಭವಿಸಲಿದೆ ಎಂದು ಈ ಹಿಂದೆ ಹೇಳಿದ್ದೆ. ಇದೀಗ ಅಂತಹ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿರುವ ನಡುವೆಯೇ ಹಿಂಗಾರು ಮಳೆ ಸಮೃದ್ಧವಾಗಲಿದೆ ಎಂದು ಕೋಡಿಶ್ರೀ ತಿಳಿಸಿದ್ದಾರೆ. ಹಿಂಗಾರು ಮಳೆ ಶುಭವಾಗುವ ಲಕ್ಷಣಗಳಿದ್ದು, ಕೆರೆ-ಕಟ್ಟೆಗಳು ತುಂಬಲಿವೆ. ಈ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಉತ್ತಮ ಮಳೆಯಾಗಲಿದ್ದು, ಶೇ.90ರಷ್ಟು ಜನರಿಗೆ, ವಿಶೇಷವಾಗಿ ರೈತರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಉತ್ತರ ಭಾರತದಲ್ಲಿ ನೇಪಾಳದಲ್ಲಿ ನಡೆದಿರುವಂತಹ ಘಟನೆಗಳು ದಕ್ಷಿಣ ಭಾರತದಲ್ಲೂ ನಡೆಯುವ ಲಕ್ಷಣಗಳಿವೆ ಎಂದು ಕೋಡಿಶ್ರೀ ಹೇಳಿದ್ದಾರೆ. ಸಾವು-ನೋವು, ದುಃಖ ಹಾಗೂ ಊರುಗಳು ಕೊಚ್ಚಿಹೋಗುವಂತಹ ಘಟನೆಗಳು ಸಂಭವಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ತಾವು ಈ ರೀತಿಯ ಬೆಳವಣಿಗೆಗಳ ಬಗ್ಗೆ ಹೇಳುತ್ತಲೇ ಬಂದಿರುವುದಾಗಿ ಅವರು ಹೇಳಿದ್ದಾರೆ. ದೇಶಗಳು ಮುಳುಗುವಂತಹ ಪರಿಸ್ಥಿತಿ, ವಿಪರೀತ ಪ್ರಮಾಣದ ನೀರು, ಜನಜಂಗುಳಿ ಹಾಗೂ ಯುದ್ಧದಂತಹ ಘಟನೆಗಳು ನಡೆಯುವ ಸಾಧ್ಯತೆ ಇದೆ. ಜನರು ನಿಯಂತ್ರಣ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಬಹುದು ಮತ್ತು ಆಳುವವರು ಅತೃಪ್ತರಾಗುವ ಸಾಧ್ಯತೆಯೂ ಇದೆ ಎಂದು ಕೋಡಿಶ್ರೀ ಹೇಳಿದ್ದಾರೆ.
ಪ್ರಕೃತಿಗೆ ವಿರುದ್ಧವಾಗಿ ಮಾನವನ ಚಟುವಟಿಕೆಗಳು ನಡೆದಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ ಎಂದು ಕೋಡಿಶ್ರೀ ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನಾದ್ಯಂತ ಮಿಲಿಯನ್ಗಟ್ಟಲೆ ಬೋರ್ವೆಲ್ಗಳನ್ನು ಕೊರೆದಿದ್ದು, ಭೂಮಿಯ ಕೆಳಭಾಗದಲ್ಲಿ ಬಂಡೆಗಳ ಮೇಲೆ ಭೂಮಿ ನಿಂತಿರುವುದರಿಂದ ಅದರ ‘ಬೇಸ್ಮೆಂಟ್’ ದುರ್ಬಲವಾಗಿದೆ ಎಂದು ಅವರು ಹೇಳಿದ್ದಾರೆ.
ಇದರಿಂದ ಪ್ರವಾಹ ಹಾಗೂ ಭೂಮಿ ಕಂಪನದಂತಹ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.



