No menu items!
16.2 C
Munich
Thursday, September 10, 2026

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ʼಗೆ ಮತ್ತೊಂದು ಕಾನೂನು ಸಂಕಷ್ಟ!

Must read

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ʼಗೆ ಮತ್ತೊಂದು ಕಾನೂನು ಸಂಕಷ್ಟ!

ಬೆಂಗಳೂರು/ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಇದೀಗ ಮೈಸೂರಿನ ಫಾರ್ಮ್‌ಹೌಸ್‌ಗೆ ಸಂಬಂಧಿಸಿದ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿ ಸಂರಕ್ಷಿತ ಹಾಗೂ ಅಪರೂಪದ ವಲಸೆ ಹಕ್ಕಿಗಳಾದ ಪಟ್ಟೆ ತಲೆ ಹೆಬ್ಬಾತುಗಳನ್ನು ಕಾನೂನುಬಾಹಿರವಾಗಿ ಪಂಜರದಲ್ಲಿ ಇಟ್ಟು ಸಾಕಿದ ಆರೋಪದ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಏನಿದು ಹೆಬ್ಬಾತು ಪ್ರಕರಣ?

ನಟ ದರ್ಶನ್ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದರ ವಿಡಿಯೋದಲ್ಲಿ ಫಾರ್ಮ್‌ಹೌಸ್‌ನಲ್ಲಿ ಅಪರೂಪದ ಹೆಬ್ಬಾತುಗಳನ್ನು ಸಾಕಿರುವುದು ಕಂಡುಬಂದಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಸಂರಕ್ಷಿತ ವನ್ಯಜೀವಿಗಳನ್ನು ಸೂಕ್ತ ಅನುಮತಿ ಇಲ್ಲದೆ ಹೊಂದಿರುವುದು ಅಥವಾ ಅವುಗಳನ್ನು ಬಂಧನದಲ್ಲಿಡುವುದು ಅಪರಾಧವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಫಾರ್ಮ್‌ಹೌಸ್‌ಗೆ ತೆರಳಿ ಪಕ್ಷಿಗಳನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.

ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9, 39 ಮತ್ತು 51ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ. ನರಸೀಪುರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಫಾರ್ಮ್‌ಹೌಸ್ ಮ್ಯಾನೇಜರ್ ನಾಗರಾಜ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಪ್ರಕರಣ ರದ್ದತಿಗೆ ಹೈಕೋರ್ಟ್ ಮೊರೆ

ಟಿ. ನರಸೀಪುರ ನ್ಯಾಯಾಲಯ ಜಾರಿ ಮಾಡಿರುವ ಸಮನ್ಸ್ ಹಾಗೂ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ, ತಮ್ಮ ಫಾರ್ಮ್‌ಹೌಸ್‌ನಲ್ಲಿ ಈಗಾಗಲೇ ಹಲವು ಸಾಕುಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಾಕಲಾಗುತ್ತಿದೆ. ಆದರೆ, ಪ್ರಕರಣದಲ್ಲಿ ಉಲ್ಲೇಖವಾಗಿರುವ ನಾಲ್ಕು ಹೆಬ್ಬಾತುಗಳು ತಾವಾಗಿಯೇ ಹಾರಿ ಬಂದು ಫಾರ್ಮ್‌ಹೌಸ್ ಆವರಣವನ್ನು ಸೇರಿಕೊಂಡಿದ್ದವು ಎಂದು ದರ್ಶನ್ ದಂಪತಿ ತಿಳಿಸಿದ್ದಾರೆ ಎನ್ನಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವಷ್ಟೇ ಆ ಪಕ್ಷಿಗಳು ಸಂರಕ್ಷಿತ ವನ್ಯಜೀವಿಗಳೆಂಬುದು ತಮ್ಮ ಗಮನಕ್ಕೆ ಬಂದಿದೆ. ಹೀಗಾಗಿ, ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ದಂಪತಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿರುವ ದರ್ಶನ್ ಅವರಿಗೆ ಈ ವನ್ಯಜೀವಿ ಪ್ರಕರಣ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಸಾಬೀತಾದರೆ, ಕಾಯ್ದೆಯ ಸಂಬಂಧಿತ ನಿಬಂಧನೆಗಳ ಪ್ರಕಾರ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ವರದಿಯಾಗಿದೆ.

ಸದ್ಯ ದರ್ಶನ್ ದಂಪತಿ ಪ್ರಕರಣ ರದ್ದತಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯ ಕೈಗೊಳ್ಳುವ ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿದೆ.

- Advertisement -spot_img

More articles

- Advertisement -spot_img

Latest article