No menu items!
13.7 C
Munich
Sunday, September 13, 2026

ಕೆಪಿಎಸ್‌ಸಿಯ ಮೂರನೇ ನೇಮಕಾತಿಯಲ್ಲೂ ಶಾಂತಾ ಹೊಸಮನಿ ಎಡವಟ್ಟು ಆರೋಪ

Must read

ಕೆಪಿಎಸ್‌ಸಿಯ ಮೂರನೇ ನೇಮಕಾತಿಯಲ್ಲೂ ಶಾಂತಾ ಹೊಸಮನಿ ಎಡವಟ್ಟು ಆರೋಪ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣಗಳ ತನಿಖೆ ಮುಂದುವರಿದಿರುವ ಬೆನ್ನಲ್ಲೇ, ಇದೀಗ ಮತ್ತೊಂದು ನೇಮಕಾತಿ ಪ್ರಕರಣದಲ್ಲೂ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ಹೆಸರು ಕೇಳಿಬಂದಿದೆ. ಕೆಎಎಸ್ ಹಾಗೂ ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕರಣಗಳ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ನೇಮಕಾತಿ ಅಕ್ರಮದಲ್ಲೂ ಶಾಂತಾ ಹೊಸಮನಿ ಅವರ ಹೆಸರು ತಳುಕು ಹಾಕಿಕೊಂಡಿದೆ.
2023ರಲ್ಲಿ ನಡೆದ ಎಇಇ ನೇಮಕಾತಿ ಅಕ್ರಮದ ತನಿಖೆಗಾಗಿ ಉಪಸಮಿತಿಯೊಂದನ್ನು ರಚಿಸಲಾಗಿತ್ತು. ಈ ಉಪಸಮಿತಿಗೆ ಶಾಂತಾ ಹೊಸಮನಿ ಅಧ್ಯಕ್ಷೆಯಾಗಿದ್ದರು ಎನ್ನಲಾಗಿದೆ. ಆದರೆ ಉಪಸಮಿತಿಯ ಕೆಲ ಸದಸ್ಯರಿಗೆ ಮಾಹಿತಿ ನೀಡದೆಯೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ಶಾಂತಾ ಹೊಸಮನಿ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಂದಿನ ಕಾರ್ಯದರ್ಶಿ ಲತಾ ಕುಮಾರಿ ಅವರ ಮೂಲಕ ಆಯ್ಕೆ ಪಟ್ಟಿ ಪ್ರಕಟಿಸಲು ಮುಂದಾಗಿದ್ದರೂ, ಉಪಸಮಿತಿಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪಟ್ಟಿ ಪ್ರಕಟವಾಗಿರಲಿಲ್ಲ ಎನ್ನಲಾಗಿದೆ. ಬಳಿಕ ಎಇಇ ನೇಮಕಾತಿ ಅಕ್ರಮದ ತನಿಖೆಗಾಗಿ ರಚಿಸಲಾಗಿದ್ದ ಉಪಸಮಿತಿಯಿಂದ ಶಾಂತಾ ಹೊಸಮನಿ ಅವರನ್ನು ಹೊರಗಿಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಕೆಎಎಸ್ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿ ಮಮಿತಾ ಅವರೊಂದಿಗೆ ಶಾಂತಾ ಹೊಸಮನಿ ಸಂಪರ್ಕದಲ್ಲಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲೂ ಶಾಂತಾ ಹೊಸಮನಿ ಅವರ ಹೆಸರು ಪ್ರಸ್ತಾಪವಾಗಿದೆ.
ಹೀಗಾಗಿ ಕೆಎಎಸ್, ಪಶುವೈದ್ಯಾಧಿಕಾರಿ ಹಾಗೂ ಎಇಇ ನೇಮಕಾತಿ ಪ್ರಕರಣಗಳಲ್ಲಿ ಶಾಂತಾ ಹೊಸಮನಿ ಅವರ ಹೆಸರು ಕೇಳಿಬರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿವಿಧ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಆರೋಪಗಳ ಕುರಿತು ತನಿಖೆ ನಡೆಯುತ್ತಿದ್ದು, ಪ್ರಕರಣದ ಸಂಪೂರ್ಣ ಸತ್ಯ ತನಿಖೆಯಿಂದ ಹೊರಬರಬೇಕಿದೆ.

- Advertisement -spot_img

More articles

- Advertisement -spot_img

Latest article