ಬ್ರಿಕ್ಸ್ ಕಾರ್ಯವಿಧಾನದಲ್ಲೇ ಸುಧಾರಣೆಗೆ ಮೋದಿ ಕರೆ; ಮುಂದಿನ ಶೃಂಗಸಭೆಯೊಳಗೆ 10 ಪ್ರಸ್ತಾವನೆ ಸಿದ್ಧಪಡಿಸಲು ಸಲಹೆ
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಬ್ರಿಕ್ಸ್ನ 20 ವರ್ಷಗಳ ಪಯಣವನ್ನು ಉಲ್ಲೇಖಿಸಿದ ಮೋದಿ, ಸಂಘಟನೆಯಲ್ಲಿರುವ ಏಕತೆ ಮತ್ತು ಒಮ್ಮತವನ್ನು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವ ಸಮಯ ಬಂದಿದೆ ಎಂದು ಹೇಳಿದರು.
ಮುಂದಿನ 20 ವರ್ಷಗಳಿಗಾಗಿ ಬ್ರಿಕ್ಸ್ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ರೂಪಿಸಬೇಕು. ಇದಕ್ಕಾಗಿ ಮೊದಲು ಸಂಘಟನೆಯ ಕಾರ್ಯವಿಧಾನದಲ್ಲೇ ಸುಧಾರಣೆ ಆರಂಭವಾಗಬೇಕು ಎಂದು ಮೋದಿ ಅಭಿಪ್ರಾಯಪಟ್ಟರು.
ಪ್ರತಿ ವರ್ಷ ಬ್ರಿಕ್ಸ್ ಅಧ್ಯಕ್ಷತೆ ಬದಲಾಗುತ್ತಿದ್ದರೂ, ಇದರಿಂದ ಸಂಘಟನೆಯ ಸಾಂಸ್ಥಿಕ ಪ್ರಗತಿಗೆ ಯಾವುದೇ ಅಡ್ಡಿಯಾಗಬಾರದು. ಅಧ್ಯಕ್ಷತೆ ಬದಲಾದರೂ ನಿರ್ಧಾರಗಳು ಮತ್ತು ಯೋಜನೆಗಳಲ್ಲಿ ನಿರಂತರತೆ ಉಳಿಯುವಂತಹ ಬಲಿಷ್ಠ ವ್ಯವಸ್ಥೆ ಅಗತ್ಯ ಎಂದು ಪ್ರಧಾನಿ ಹೇಳಿದರು.
ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆ ಪಿರಮಿಡ್ನಂತಿದ್ದು, ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ಕೆಲವೇ ದೇಶಗಳು ಹಾಗೂ ಸಂಸ್ಥೆಗಳ ಬಳಿ ಕೇಂದ್ರೀಕೃತವಾಗಿದೆ. ಇಂತಹ ನಿರ್ಧಾರಗಳಿಂದ ನೇರವಾಗಿ ಪರಿಣಾಮಕ್ಕೊಳಗಾಗುವ ಹಲವು ದೇಶಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಮೋದಿ ಹೇಳಿದರು.
ಎಲ್ಲ ದೇಶಗಳ ಧ್ವನಿಗೂ ಸೂಕ್ತ ಪ್ರಾತಿನಿಧ್ಯ ದೊರೆಯುವಂತಹ ಜಾಗತಿಕ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಬ್ರಿಕ್ಸ್ ಕೆಲಸ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು.
ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆಗಾಗಿ ಮುಂದಿನ ಶೃಂಗಸಭೆಯೊಳಗೆ 10 ಪ್ರಸ್ತಾವನೆಗಳನ್ನು ಸಿದ್ಧಪಡಿಸಿ, ಅವುಗಳನ್ನು ಬ್ರಿಕ್ಸ್ ಸುಧಾರಣಾ ಮಾರ್ಗಸೂಚಿಯಾಗಿ ರೂಪಿಸುವ ಪ್ರಸ್ತಾವವನ್ನು ಮೋದಿ ಮುಂದಿಟ್ಟರು. ಈ ಸುಧಾರಣೆಯಲ್ಲಿ ಪ್ರಾತಿನಿಧ್ಯ, ಸ್ಪಂದನಶೀಲತೆ ಮತ್ತು ನಿಯಮ ರೂಪಿಸುವಿಕೆ ಎಂಬ ಮೂರು ಪ್ರಮುಖ ಅಂಶಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಇನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸುಧಾರಣೆಯನ್ನು ಇನ್ನು ಮುಂದೆ ಮುಂದೂಡಲು ಸಾಧ್ಯವಿಲ್ಲ ಎಂದು ಮೋದಿ ಪ್ರತಿಪಾದಿಸಿದರು. ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿ ಮತದಾನದ ಹಕ್ಕು ಮತ್ತು ಆರ್ಥಿಕ ನೀತಿಗಳು ಇಂದಿನ ವಾಸ್ತವಿಕತೆಗೆ ಅನುಗುಣವಾಗಿ ಬದಲಾಗಬೇಕು. ಜಾಗತಿಕ ಆರ್ಥಿಕತೆಗೆ ವೇಗ ನೀಡುತ್ತಿರುವ ದೇಶಗಳಿಗೆ ಸೂಕ್ತ ಪಾತ್ರ ದೊರೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.



