ಆಂಟಿ ಹಿಂದೆ ಬಿದ್ದು ಪೇಚಿಗೆ ಸಿಲುಕಿದ ‘ಟ್ಯಾಟೂ ಘೋಸ್ಟ್’; ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ ಆರೋಪ!
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಮಹಿಳೆಯೊಬ್ಬರ ವಿರುದ್ಧ ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ದೂರು ನೀಡಿದ್ದಾರೆ. ಅಲ್ಲದೇ, ಪರಪುರುಷನ ಜೊತೆ ಮಹಿಳೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ವಿಚಾರ ಪ್ರಶ್ನಿಸಿದ ವೇಳೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
‘ಘೋಸ್ಟ್’ ಟ್ಯಾಟೂ ಆರ್ಟಿಸ್ಟ್ ಎಂದೇ ಪರಿಚಿತರಾಗಿರುವ ಅರ್ಜುನ್ಗೆ ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಮಹಿಳೆಯೊಬ್ಬರ ಪರಿಚಯವಾಗಿತ್ತು ಎನ್ನಲಾಗಿದೆ. ಮಹಿಳೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ತಮ್ಮ ಪತಿ ಮೃತಪಟ್ಟಿದ್ದಾರೆ ಎಂದು ಆಕೆ ಅರ್ಜುನ್ಗೆ ತಿಳಿಸಿದ್ದಳು ಎನ್ನಲಾಗಿದೆ.
ಕ್ರಮೇಣ ಇಬ್ಬರ ನಡುವಿನ ಪರಿಚಯ ಸ್ನೇಹವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೇ ಸಂದರ್ಭದಲ್ಲಿ ಅರ್ಜುನ್ಗೂ ಅವರ ಪತ್ನಿಯೊಂದಿಗೆ ವಿಚ್ಛೇದನವಾಗಿತ್ತು ಎನ್ನಲಾಗಿದೆ. ಬಳಿಕ ಮಹಿಳೆ ಅರ್ಜುನ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಳು ಎಂದು ಆರೋಪಿಸಲಾಗಿದೆ.
ಮಹಿಳೆಯ ಮಾತನ್ನು ನಂಬಿದ್ದ ಅರ್ಜುನ್, ಹಲವು ಸಂದರ್ಭಗಳಲ್ಲಿ ಆಕೆಗೆ ಹಣ ನೀಡಿದ್ದರು ಎನ್ನಲಾಗಿದೆ. ಆದರೆ ಕಳೆದ ಒಂದು ವರ್ಷದಿಂದ ‘ನಾಳೆ, ನಾಡಿದ್ದು’ ಎಂದು ಹೇಳುತ್ತಾ ಮಹಿಳೆ ಮದುವೆಯನ್ನು ಮುಂದೂಡುತ್ತಿದ್ದರು ಎಂದು ಅರ್ಜುನ್ ಆರೋಪಿಸಿದ್ದಾರೆ.
ಇದೇ ತಿಂಗಳ 2ರಂದು ಅರ್ಜುನ್ ಮಹಿಳೆಗೆ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆಕೆಯ ಮನೆ ಬಳಿ ತೆರಳಿದ್ದಾಗ, ಪರಪುರುಷನೊಂದಿಗೆ ಮಹಿಳೆ ಅಶ್ಲೀಲವಾಗಿ ಮಾತನಾಡುತ್ತಿದ್ದುದನ್ನು ಕಂಡಿದ್ದಾಗಿ ಅರ್ಜುನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರಶ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಜಗಳವಾಗಿದೆ ಎನ್ನಲಾಗಿದೆ. ಈ ವೇಳೆ ಮಹಿಳೆ ಕಬ್ಬಿಣದ ರಾಡ್ನಿಂದ ಅರ್ಜುನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ಸಂಬಂಧ ಅರ್ಜುನ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನು ಘಟನೆ ಬಳಿಕ ಮರ್ಯಾದೆಗೆ ಅಂಜಿದ ಅರ್ಜುನ್, ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆಯನ್ನು ಅಪಘಾತ ಎಂದು ಬಿಂಬಿಸುವ ರೀತಿಯಲ್ಲಿ ವಿಡಿಯೋ ಮಾಡಿದ್ದರು ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದರ ನಡುವೆ ಟ್ಯಾಟೂ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಅರ್ಜುನ್ಗೆ ಇತ್ತೀಚೆಗೆ ಸಿನಿಮಾಗಳಲ್ಲೂ ನಟಿಸುವ ಅವಕಾಶ ದೊರೆತಿತ್ತು ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.



