15 ವರ್ಷಗಳ ಜಮೀನು ವಿವಾದಕ್ಕೆ ಬಿಗ್ ಟ್ವಿಸ್ಟ್..! ಮೋದಿ ಭೇಟಿಯಾದ ಬೆನ್ನಲ್ಲೇ ಶಾಲಾ ಗೆಳೆಯನಿಗೆ ಸಿಕ್ತು ರಿಲೀಫ್
ಪ್ರಧಾನಿ ನರೇಂದ್ರ ಮೋದಿ ಅವರ 81 ವರ್ಷದ ಶಾಲಾ ಗೆಳೆಯ ಅಸ್ಗರ್ ಅಲಿ ವೋರಾ… ಬರೋಬ್ಬರಿ 15 ವರ್ಷಗಳಿಂದ ಜಮೀನು ವಿವಾದದ ವಿರುದ್ಧ ಹೋರಾಟ ಮಾಡ್ತಿದ್ದರು. ಕೊನೆಗೆ ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಇದೀಗ ಈ ಭೇಟಿ ಬಳಿಕ ವಿವಾದದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಮಹಾರಾಷ್ಟ್ರದ ಭಯಂದರ್ ಪೂರ್ವದ ನವಘರ್‌ನಲ್ಲಿರುವ 2,810 ಚದರ ಮೀಟರ್ ಜಮೀನನ್ನು 1989ರಲ್ಲಿ ಖರೀದಿಸಿದ್ದೆ ಎಂದು ವೋರಾ ಹೇಳಿದ್ದಾರೆ. ಆದರೆ 2011ರಲ್ಲಿ ನಕಲಿ ದಾಖಲೆಗಳ ಮೂಲಕ ಜಮೀನನ್ನು ತಮ್ಮ ಅರಿವಿಗೆ ಬಾರದಂತೆ ಎರಡು ಭಾಗಗಳಾಗಿ ವಿಂಗಡಿಸಿ ನಿರ್ಮಾಣ ಸಂಸ್ಥೆಗಳ ವಶಕ್ಕೆ ನೀಡಲಾಗಿದೆ ಅನ್ನೋದು ವೋರಾ ಆರೋಪ.
ಈ ವಿವಾದದಲ್ಲಿ ಬಿಜೆಪಿ ಶಾಸಕ ನರೇಂದ್ರ ಮೆಹ್ತಾ ಅವರೊಂದಿಗೆ ಸಂಪರ್ಕ ಹೊಂದಿದೆ ಎಂದು ವೋರಾ ಆರೋಪಿಸಿರುವ ನಿರ್ಮಾಣ ಸಂಸ್ಥೆಯ ಹೆಸರೂ ಕೇಳಿಬಂದಿತ್ತು. 2015ರಲ್ಲೇ ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ತನಿಖೆ ಮತ್ತು ವಿಳಂಬದ ಬಗ್ಗೆ ವೋರಾ ಪ್ರಶ್ನೆ ಎತ್ತಿದ್ದರು. ಜೊತೆಗೆ ನಕಲಿ ದಾಖಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದರು.
ಇದೀಗ ಪ್ರಧಾನಿ ಭೇಟಿಯ ಕೆಲವೇ ದಿನಗಳ ಬಳಿಕ ಮಹಾರಾಷ್ಟ್ರದ ಸಚಿವಾಲಯದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಸಭೆಯಲ್ಲಿ ಅಸ್ಗರ್ ಅಲಿ ವೋರಾ, ಶಾಸಕ ನರೇಂದ್ರ ಮೆಹ್ತಾ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು.
ಈ ಸಭೆಯ ಬಳಿಕ ವಿವಾದಿತ ಜಮೀನಿನ ಮೇಲಿನ ಸ್ವಾಧೀನವನ್ನು ಬಿಟ್ಟುಕೊಡುವುದಾಗಿ ಹಾಗೂ ಜಮೀನಿಗೆ ನೀಡಿದ್ದ ನಿರ್ಮಾಣ ಅನುಮತಿಯನ್ನು ಹಿಂಪಡೆಯುವುದಾಗಿ ನರೇಂದ್ರ ಮೆಹ್ತಾ ಪತ್ರ ನೀಡಿದ್ದಾರೆ ಎಂದು ವರದಿಯಾಗಿದೆ. ವೋರಾ ವಿರುದ್ಧ ಈ ಹಿಂದೆ ನೀಡಿದ್ದ ಪೊಲೀಸ್ ದೂರನ್ನು ಹಿಂಪಡೆಯುವುದಾಗಿಯೂ ಅವರು ತಿಳಿಸಿದ್ದಾರೆ.
ಹೀಗಾಗಿ, 15 ವರ್ಷಗಳಿಂದ ನಡೆಯುತ್ತಿದ್ದ ಜಮೀನು ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಆದ್ರೆ ಈ ಬೆಳವಣಿಗೆಗೆ ಪ್ರಧಾನಿ ಭೇಟಿಯೇ ನೇರ ಕಾರಣವೇ ಎಂಬುದಕ್ಕೆ ಅಧಿಕೃತ ದೃಢೀಕರಣ ಇಲ್ಲ. ವೋರಾ ಮಾತ್ರ ಈ ಬೆಳವಣಿಗೆಯ ಬಳಿಕ ಜಮೀನು ವಿವಾದ ಬಗೆಹರಿಯುವ ಹಂತಕ್ಕೆ ಬಂದಿದೆ ಎಂದು ಹೇಳಿದ್ದಾರೆ.
15 ವರ್ಷಗಳ ಜಮೀನು ಹೋರಾಟ… ಮೋದಿ ಭೇಟಿಯ ಬಳಿಕ ಮಹತ್ವದ ಬೆಳವಣಿಗೆ..! ಈಗ ಈ ಪ್ರಕರಣದ ಮುಂದಿನ ಕಾನೂನು ಕ್ರಮಗಳತ್ತ ಎಲ್ಲರ ಚಿತ್ತ ನೆಟ್ಟಿದೆ.



