ಸ್ಮೃತಿ-ಶೆಫಾಲಿ ಅಬ್ಬರ, ಬೌಲರ್ ಗಳ ದಾಳಿಗೆ ಲಂಕಾ ತತ್ತರ: ಫೈನಲ್ ನಲ್ಲಿ ಶ್ರೀಲಂಕಾ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟ ವನಿತೆಯರು!
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ, ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 147 ರನ್ಗಳಿಂದ ಮಣಿಸಿದ ಭಾರತ, 2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಗೆದ್ದಿದ್ದ ಚಿನ್ನದ ಪದಕವನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿತು.
ಕೊರೋಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ ಓವರ್ಗಳಲ್ಲಿ 216 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮಂಧಾನ 79 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರೆ, ಶಫಾಲಿ ವರ್ಮಾ 48 ರನ್ಗಳ ಕೊಡುಗೆ ನೀಡಿದರು.
ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಕೂಡ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು. ವಿಕೆಟ್ಕೀಪರ್-ಬ್ಯಾಟರ್ ರಿಚಾ ಘೋಷ್ ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 22 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿದ ರಿಚಾ, ಭಾರತದ ಸ್ಕೋರ್ 200ರ ಗಡಿ ದಾಟುವಂತೆ ಮಾಡಿದರು.
216 ರನ್ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಭಾರತದ ಬೌಲರ್ಗಳು ಯಾವುದೇ ಅವಕಾಶ ನೀಡಲಿಲ್ಲ. ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿದ ಲಂಕಾ ಬ್ಯಾಟರ್ಗಳು ನಿರಂತರವಾಗಿ ವಿಕೆಟ್ಗಳನ್ನು ಕಳೆದುಕೊಂಡರು.
ಅಂತಿಮವಾಗಿ ಶ್ರೀಲಂಕಾ ತಂಡ 15.4 ಓವರ್ಗಳಲ್ಲಿ ಕೇವಲ 69 ರನ್ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 147 ರನ್ಗಳ ಭರ್ಜರಿ ಗೆಲುವು ದಾಖಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ನಲ್ಲಿ ಭಾರತ ಸತತ ಎರಡನೇ ಚಿನ್ನದ ಪದಕ ಗೆದ್ದಂತಾಗಿದೆ. 2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲೂ ಭಾರತ ಮಹಿಳಾ ತಂಡವೇ ಚಾಂಪಿಯನ್ ಆಗಿತ್ತು.
ಫೈನಲ್ಗೂ ಮುನ್ನ ಭಾರತ ತಂಡ ಕ್ವಾರ್ಟರ್ಫೈನಲ್ನಲ್ಲಿ ಜಪಾನ್ ವಿರುದ್ಧ ಎಂಟು ವಿಕೆಟ್ಗಳ ಗೆಲುವು ದಾಖಲಿಸಿತ್ತು. ಬಳಿಕ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು 114 ರನ್ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿತ್ತು. ಮತ್ತೊಂದೆಡೆ ಶ್ರೀಲಂಕಾ ಸೆಮಿಫೈನಲ್ನಲ್ಲಿ ಪಾಕಿಸ್ತಾನವನ್ನು ಎಂಟು ವಿಕೆಟ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಇದೇ ತಿಂಗಳ ಆರಂಭದಲ್ಲಿ ನಡೆದ ಮಹಿಳಾ ಏಷ್ಯಾ ಕಪ್ ಫೈನಲ್ನಲ್ಲೂ ಭಾರತ ತಂಡ ಶ್ರೀಲಂಕಾವನ್ನು ಮಣಿಸಿತ್ತು. ಇದೀಗ ಮತ್ತೊಮ್ಮೆ ಅದೇ ಎದುರಾಳಿಯನ್ನು ಪ್ರಶಸ್ತಿ ಪಂದ್ಯದಲ್ಲಿ ಸೋಲಿಸುವ ಮೂಲಕ ಹರ್ಮನ್ಪ್ರೀತ್ ಕೌರ್ ಪಡೆ ಏಷ್ಯನ್ ಗೇಮ್ಸ್ನಲ್ಲಿನ ತನ್ನ ಚಾಂಪಿಯನ್ ಪಟ್ಟವನ್ನು ಯಶಸ್ವಿಯಾಗಿ ಉಳಿಸಿಕೊಂಡಿದೆ.



