ಗೃಹಲಕ್ಷ್ಮಿ ಫಲಾನುಭವಿಗಳೇ ಗಮನಿಸಿ! ₹2,000 ಪಡೆಯಲು ಇನ್ಮುಂದೆ 17 ಪ್ರಶ್ನೆಗಳಿಗೆ ಉತ್ತರಿಸಬೇಕು; ಪತಿಯ ಆಧಾರ್ ಕೂಡ ಕಡ್ಡಾಯ
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಸಂಬಂಧ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಯನ್ನು ರೂಪಿಸಿದೆ. ಫಲಾನುಭವಿ ಮಹಿಳೆಯ ಆಧಾರ್ ಜೊತೆಗೆ ಆಕೆಯ ಪತಿಯ ಆಧಾರ್ ಲಿಂಕ್ ಮಾಡುವುದನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ಕೈಗೊಳ್ಳುವ ನಿಟ್ಟಿನಲ್ಲಿ ಹಲವು ಅಂಶಗಳನ್ನು ಒಳಗೊಂಡ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗಿದ್ದು, ಯೋಜನೆಯ ಪ್ರಯೋಜನವನ್ನು ರಾಜ್ಯದ ಅರ್ಹ ಫಲಾನುಭವಿಗಳಿಗೆ ಮಾತ್ರ ಸೀಮಿತಗೊಳಿಸುವ ನಿಟ್ಟಿನಲ್ಲಿಯೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ?
• ಮನೆಯ ಯಜಮಾನಿಯ ಆಧಾರ್ ಜೊತೆಗೆ ಪತಿಯ ಆಧಾರ್ ಲಿಂಕ್ ಮಾಡುವುದು ಕಡ್ಡಾಯ.
• ಫಲಾನುಭವಿಯ ಬ್ಯಾಂಕ್ ಖಾತೆಯಲ್ಲಿ ಯಾವುದೇ ಸಾಲ ಇರಬಾರದು.
• ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು ಮತ್ತು ವಿಳಾಸ ಹೊಂದಿರಬೇಕು.
• ಪಡಿತರ ಚೀಟಿ ಹಾಗೂ ಆಧಾರ್ ಪರಿಶೀಲನೆ ಕಡ್ಡಾಯ.
• ಮುಖದ ದೃಢೀಕರಣ (Facial Authentication) ಪ್ರಕ್ರಿಯೆ ಕಡ್ಡಾಯ.
ಇನ್ನು ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ₹2,000 ಪಡೆಯುತ್ತಿರುವ ಮಹಿಳೆಯರಿಗೆ ಹೊಸ ಷರತ್ತುಗಳನ್ನು ವಿಧಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಫಲಾನುಭವಿಗಳ ಮರುಪರಿಶೀಲನೆ ಹೆಸರಿನಲ್ಲಿ ಪತಿಯ ಆಧಾರ್ ಲಿಂಕ್ ಕಡ್ಡಾಯಗೊಳಿಸಿರುವುದು, ಹೊಸ ಪ್ರಶ್ನಾವಳಿಯ ಮೂಲಕ ಮಾಹಿತಿ ಸಂಗ್ರಹಿಸುವುದು ಹಾಗೂ ಬಯೋಮೆಟ್ರಿಕ್ ಅಥವಾ ಫೇಶಿಯಲ್ ದೃಢೀಕರಣ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.
ಯೋಜನೆಯ ಹಣ ಪಾವತಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿರುವ ಅವರು, ಫಲಾನುಭವಿಗಳಿಂದ ಪದೇಪದೇ ದಾಖಲೆಗಳನ್ನು ಕೇಳುವುದು ಹಾಗೂ ಪರಿಶೀಲನೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊಸ ಮಾರ್ಗಸೂಚಿಗಳನ್ನು ಹಿಂಪಡೆಯದಿದ್ದರೆ ಮಹಿಳೆಯರ ಪರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.



