ನಮ್ಮ ಮಾತು, ಭಾವನೆಗಳಿಗೆ ಬೆಲೆಯೇ ಇಲ್ಲ: ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ
ವಿಜಯಪುರ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ್ ಇತ್ತೀಚೆಗೆ ಒತ್ತಾಯಿಸಿದ್ದರು. ಸೆಪ್ಟೆಂಬರ್ 18ರಂದು ಇಂಡಿಯಲ್ಲಿ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿಯೂ ಇಂಡಿ, ಚಡಚಣ ಹಾಗೂ ತಾಳಿಕೋಟೆ ತಾಲೂಕುಗಳನ್ನು ಸೆಪ್ಟೆಂಬರ್ 30ರೊಳಗೆ ಬರಪೀಡಿತವೆಂದು ಘೋಷಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದರು.
ತಮ್ಮ ರಾಜೀನಾಮೆ ನಿರ್ಧಾರದ ಕುರಿತು ಅಸಮಾಧಾನ ಹೊರಹಾಕಿರುವ ಪಾಟೀಲ್, ಈಗಿನ ರಾಜಕೀಯ ವಾತಾವರಣದಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ಹಾಗೂ ಒತ್ತಡ ತಂತ್ರ ಅನುಸರಿಸುವವರಿಗೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಆದರೆ ಸೌಮ್ಯ ಸ್ವಭಾವದವರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಕ್ಷೇತ್ರದ ಜನರ ಆಶೆ-ಆಕಾಂಕ್ಷೆಗಳಿಗೆ ಸ್ಪಂದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಮನವಿ ಮಾಡಿದರೂ ಕ್ಷೇತ್ರದ ಬೇಡಿಕೆಗೆ ಮನ್ನಣೆ ಸಿಗದಿರುವುದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಗುರುತಿಸುವಿಕೆ ಹಂತ ಹಂತವಾಗಿ ನಡೆಯುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಸರ್ಕಾರ ಈಗಾಗಲೇ 124 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದು, ಮತ್ತಷ್ಟು ತಾಲೂಕುಗಳನ್ನು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಮುಂದುವರಿದಿದೆ.



