ಸುಂಟರಗಾಳಿ’ ಖ್ಯಾತಿಯ ಹಿರಿಯ ಪೋಷಕ ನಟಿ ಲಲಿತಮ್ಮ ವಿಧಿವಶ!
ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, ‘ಸುಂಟರಗಾಳಿ’ ಸಿನಿಮಾದ ‘ಸಾರಾಯಿ ಶಾರದೆ’ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಲಲಿತಮ್ಮ (65) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಲಲಿತಮ್ಮ ಅವರಿಗೆ ಇತ್ತೀಚೆಗೆ ಸ್ಟ್ರೋಕ್ (ಪಾರ್ಶ್ವವಾಯು) ಆಗಿತ್ತು. ಕಳೆದ ಕೆಲ ದಿನಗಳಿಂದ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಮದಲ್ಲಿ ಅವರಿಗೆ ಆರೈಕೆ ಮಾಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 9:30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಲಲಿತಮ್ಮ ಅವರು ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿ ಕಲಾ ಸೇವೆ ಸಲ್ಲಿಸಿದ್ದರು. ನೂರಾರು ನಾಟಕ ಹಾಗೂ ಪ್ರದರ್ಶನಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಅವರು, ತದನಂತರ ಕಿರುತೆರೆ ಹಾಗೂ ಬೆಳ್ಳಿಪರದೆಯತ್ತ ಪಾದಾರ್ಪಣೆ ಮಾಡಿದ್ದರು.
ಕಿರುತೆರೆಯಲ್ಲಿ ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಲಲಿತಮ್ಮ, ನಟ ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನಿಮಾದಲ್ಲಿ ಮಾಡಿದ್ದ ‘ಸಾರಾಯಿ ಶಾರದೆ’ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಪಾತ್ರ ತಂದುಕೊಟ್ಟ ಜನಪ್ರಿಯತೆಯಿಂದಾಗಿ ಅವರಿಗೆ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಾಲು ಸಾಲು ಅವಕಾಶಗಳು ಒಲಿದು ಬಂದವು.
ನಂತರ ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ’, ‘ಲೈಫ್ ಇಷ್ಟೇನೆ’, ‘ಕಿತ್ತೂರು’, ‘ಪುತ್ರ’ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಹಿರಿಯ ನಟಿ ಲಲಿತಮ್ಮ ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು, ಕಿರುತೆರೆ ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.



